LATEST NEWS
ಕಟಪಾಡಿ ನೇಕಾರ ಲಕ್ಷ್ಮಣ ಶೆಟ್ಟಿಗಾರ್ ಅವರ ನೆರವಿಗೆ ನಿಂತ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಉಡುಪಿ ಸೆಪ್ಟೆಂಬರ್ 23: ಉಡುಪಿಯಲ್ಲಿ ಸುರಿದ ಮಹಾಮಳೆಗೆ ಬದುಕಿಗೆ ಆಧಾರವಾಗಿದ್ದ ಕೈಮಗ್ಗ ಹಾಳಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕಟಪಾಡಿ ಮಟ್ಟುವಿನ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡಾ ಸಹಾಯಕ್ಕೆ ನಿಂತಿದ್ದಾರೆ.
ಲಕ್ಷ್ಮಣ್ ಶೆಟ್ಟಿಗಾರ್ ಕುಟುಂಬಕ್ಕೆ ತಕ್ಷಣ ನೆರವು ನೀಡುವಂತೆ ಕೇಂದ್ರ ಸರಕಾರದ ಟೆಕ್ಸ್‌ಟೈಲ್ ಇಲಾಖೆಯ ಅಧೀನದಲ್ಲಿರುವ ಬೆಂಗಳೂರು ನೇಕಾರರ ಸೇವಾ ಕೇಂದ್ರಕ್ಕೆ ಅವರು ನಿರ್ದೇಶನ ನೀಡಿದ್ದಾರೆ.

ಉಡುಪಿಯಲ್ಲಿ ಸುರಿದ ಮಹಾಮಳೆ ಸಂದರ್ಭ ಲಕ್ಷ್ಮಣ ಶೆಟ್ಟಿಗಾರ್ ಅವರು ಪತ್ನಿ ಜತೆ ನೆರೆ ನೀರಿನಲ್ಲಿ ಅಸಹಾಯಕ ಸ್ಥಿತಿಯಲ್ಲಿ ನಿಂತಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗಿತ್ತು. ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಸುದ್ದಿಯನ್ನು ಗಮನಿಸಿ, ನೆರವಿಗೆ ಧಾವಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಅದರಂತೆ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಶಿವಶಂಕರ್, ಲಕ್ಷ್ಮಣ ಶೆಟ್ಟಿಗಾರ್ ನಿವಾಸಕ್ಕೆ ಭೇಟಿನೀಡಿ ತುರ್ತು ಆರ್ಥಿಕ ನೆರವು ನೀಡಿದರು. ವೀವರ್ಸ್ ಸರ್ವಿಸ್ ಸೆಂಟರ್ ಅಧಿಕಾರಿಗಳಾದ ಜವಹರ್ ಹಾಗೂ ತುಳಸಿ ರಾಮ್ ಮಗ್ಗದ ಮನೆ ಹಾಗೂ ಬದಲಿ ಸಲಕರಣೆಗೆ ನೆರವು ಮಂಜೂರು ಮಾಡಿದರು.