LATEST NEWS
ಒಂಬತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಧರ್ಮಗಳ ವೈಭವೀಕರಣ
ಒಂಬತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಧರ್ಮಗಳ ವೈಭವೀಕರಣ
ಮಂಗಳೂರು ಜೂನ್ 4: ಸೈನಿಕರನ್ನು ಅತ್ಯಾಚಾರಿಗಳಂತೆ ಬಿಂಬಿಸಿದ ಪಠ್ಯ ಪುಸ್ತಕ ಹೊರತಂದ ರಾಜ್ಯ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಈ ಬಾರಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಒಂಬತ್ತನೇ ಕನ್ನಡ ಹಾಗೂ ಆಂಗ್ಲ ಮಾಧ್ಯಮ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಎರಡು ಧರ್ಮಗಳನ್ನು ವೈಭವೀಕರಿಸುವ ಪ್ರಯತ್ನಗಳು ನಡೆದಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ಪ್ರಥಮ ಅಧ್ಯಾಯದಲ್ಲೇ ಇಸ್ಲಾಂ ಹಾಗೂ ಕ್ರಿಶ್ಚಿಯನ್ ಮತಗಳ ಬಗ್ಗೆ ವಿಸೃತ ಮಾಹಿತಿ ನೀಡುವ ಮೂಲಕ ಎಳೆವ ಮನಸ್ಸಿನಲ್ಲೇ ತಾರತಮ್ಯ ನೀತಿ ಅನುಸರಿಸುವ ಯತ್ನವೂ ನಡೆದಿದೆ.
ಸೈನಿಕರನ್ನು ಅತ್ಯಾಚಾರಿಗಳು ಎಂದು ಬಿಂಬಿಸಿದ ಪಠ್ಯವನ್ನು ಪಿ.ಯು.ಸಿ ಪಠ್ಯ ಪುಸ್ತಕದಲ್ಲಿ ಸೇರಿಸಿದ್ದ ರಾಜ್ಯ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಈ ಬಗ್ಗೆ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಸದ್ರಿ ಪಠ್ಯವನ್ನು ಪುಸ್ತಕದಿಂದ ತೆಗೆದು ಹಾಕಲಾಗಿತ್ತು. ಆದರೆ ಈ ಬಾರಿ ಮತ್ತೆ ಇಂಥಹುದೇ ಒಂದು ವಿವಾದಾತ್ಮಕ ಪಠ್ಯವನ್ನು ಒಂಬತ್ತನೇ ತರಗತಿಯ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ ಎನ್ನುವ ಆರೋಪ ವ್ಯಕ್ತವಾಗಿದೆ.
ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪುಸ್ತಕದ ಮೊದಲ ಅಧ್ಯಾಯದಲ್ಲೇ ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮದ ಕುರಿತು ವಿಸೃತವಾದ ಮಾಹಿತಿಯನ್ನು ನೀಡಲಾಗಿದೆ. ಆದರೆ ಈ ಪಠ್ಯದಲ್ಲಿ ಹಿಂದೂ ಧರ್ಮದ ಕುರಿತು ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ ಎನ್ನುವ ಆರೋಪ ಇದೀಗ ವ್ಯಕ್ತವಾಗಿದೆ. ಜಾತ್ಯಾತೀತ ತತ್ವದ ಪ್ರಕಾರ ಧರ್ಮದ ವಿಚಾರದಲ್ಲಿ ಎಲ್ಲಾ ಧರ್ಮಗಳನ್ನೂ ಸಮಾನವಾಗಿ ನೋಡಬೇಕಾಗಿದ್ದರೂ, ಇಲ್ಲಿ ಮಾತ್ರ ಕೇವಲ ಎರಡು ಧರ್ಮಗಳನ್ನು ಮಾತ್ರ ವೈಭವೀಕರಿಸಲಾಗಿದೆ.
ಅಲ್ಲದೆ ವಿಧ್ಯಾರ್ಥಿಗಳಿಗೆ ಮಸೀದಿ ಹಾಗೂ ಚರ್ಚ್ ಗಳಿಗೆ ತೆರಳಿ ಅಲ್ಲಿ ನಡೆಯುವ ವಿಧಿ ವಿಧಾನಗಳನ್ನು ನೋಡಿ ಟಿಪ್ಪಣಿ ಬರೆಯುವಂತೆಯೂ ಸೂಚಿಸಲಾಗಿದೆ. ಶಾಲೆ ಎಂದಾಗ ಅಲ್ಲಿ ಜಾತಿ, ಧರ್ಮದ ವಿಚಾರ ಬರುವುದಿಲ್ಲ. ಎಲ್ಲಾ ಜಾತಿಯ, ಧರ್ಮದ ಮಕ್ಕಳು ಶಾಲೆಗೆ ಬರುತ್ತಿದ್ದು, ಇಂಥ ಪಠ್ಯಗಳು ಸಾಮರಸ್ಯದ ಬದಲು ತಾರತಮ್ಯವನ್ನು ತರುವ ಪ್ರಯತ್ನ ನಡೆಸಲಾಗಿದೆ ಎನ್ನು ಆರೋಪವೂ ವ್ಯಕ್ತವಾಗುತ್ತಿದೆ.
ಎಳೆಯ ಮನಸ್ಸಿನಲ್ಲಿ ಈ ರೀತಿಯ ತಾರತಮ್ಯವನ್ನು ಬಿಂಬಿಸುವ ಪ್ರಯತ್ನ ನಡೆಸುವುದು ಸರಿಯಲ್ಲ ಎನ್ನುವ ಭಾವನೆ ಎಲ್ಲಾ ವರ್ಗಗಳಿಂದಲೂ ಇದೀಗ ಕೇಳಿ ಬರುತ್ತಿದೆ. ಮತ-ಧರ್ಮಗಳ ಬಗ್ಗೆ ಮಾಹಿತಿ ನೀಡುವುದೇ ಆದಲ್ಲಿ ಎಲ್ಲಾ ಧರ್ಮದ ಬಗ್ಗೆಯೂ ಮಾಹಿತಿ ನೀಡಬೇಕಿತ್ತು. ಅದು ಬಿಟ್ಟು ಕೇವಲ ಎರಡು ಧರ್ಮಗಳ ಬಗ್ಗೆ ಮಾತ್ರ ಮಾಹಿತಿ ನೀಡುವುದರಿಂದ ಸಮಾಜಕ್ಕೆ ಹಾಗೂ ಎಳೆಯ ಮನಸ್ಸಿಗೆ ತಪ್ಪು ಸಂದೇಶ ಕಳುಹಿಸಿದಂತಾಗುತ್ತದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ. ಕೂಡಲೇ ಸರಕಾರ ಕಾರ್ಯಪ್ರವೃತ್ತವಾಗಿದೆ ಈ ಪಠ್ಯ ಪುಸ್ತಕವನ್ನು ನಿಷೇಧಿಸದೇ ಹೋದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯೂ ಕೇಳಿ ಬರಲಾರಂಭಿಸಿದೆ.
ಧರ್ಮಗಳ ಕುರಿತ ಅಧ್ಯಾಯ ಇದೀಗ ಮತ್ತೆ ವಿವಾದಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳೂ ಕೇಳಿ ಬರುತ್ತಿದೆ. ಸರಕಾರ ಕೂಡಲೇ ಈ ಬಗ್ಗೆ ಗಮನ ಹರಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಇದೇ ವಿಚಾರ ಉಗ್ರ ಸ್ವರೂಪ ಪಡೆಯುವ ಸಾಧ್ಯತೆಯೂ ಹೆಚ್ಚಾಗಿದೆ.