LATEST NEWS
ಗಂಭೀರ ಸ್ಥಿತಿಯಲ್ಲಿರುವ ಶಂಕಿತ ಉಗ್ರ ಶಾರೀಕ್….ವೆಂಟಿಲೇಟರ್ ನಲ್ಲಿ ಚಿಕಿತ್ಸೆ

ಮಂಗಳೂರು ನವೆಂಬರ್ 23: ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಉಗ್ರ ಶಾರೀಕ್ ಇದೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಆತನಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿರುವ ಉಗ್ರ ಶಾರೀಕ್ ಗ ಸ್ಪೋಟ ಸಂದರ್ಭದಲ್ಲಿ ಶೇಕಡ 45 ರಷ್ಟು ಸುಟ್ಟಗಾಯಗಳಾಗಿದೆ.ಅಲ್ಲದೆ ಕುಕ್ಕರ್ ಬಾಂಬು ಸ್ಫೋಟದ ವೇಳೆ ಭಾರಿ ಪ್ರಮಾಣದ ಹೊಗೆ ಕಂಡುಬಂದಿತ್ತು, ಸ್ಪೋಟದ ಹೊಗೆ ಶ್ವಾಸಕೋಶ ಪ್ರವೇಶಿಸಿರುವುದರಿಂದ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಶಾರಿಕ್ ನ ಕುತ್ತಿಗೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಮಾತನಾಡಲು ಆಗುತ್ತಿಲ್ಲ, ಕುತ್ತಿಗೆಯ ಗಾಯಗಳಿಗೆ ವೈದ್ಯರ ತಂಡವೊಂದು ವಿಶೇಷ ಚಿಕಿತ್ಸೆ ನೀಡುತ್ತಿದ್ದು, ಇನ್ನು ಮೂರು ವಾರಗಳ ಕಾಲ ಚಿಕಿತ್ಸೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ನಡುವೆ ಶಾರೀಕ್ ಸ್ಥಿತಿ ಗಂಭೀರವಾಗಿರುವುದರಿಂದ ಪೊಲೀಸರಿಗೆ ಘಟನೆ ಸಂಬಂಧ ಶಾರೀಕ್ ಹೇಳಿಕೆ ಪಡೆಯೋಕೆ ಆಗ್ತಿಲ್ಲ. ಆದರೆ ಆತ ಚೇತರಿಸಿಕೊಂಡರೆ ಸತ್ಯ ಕಕ್ಕಿಸಲು ಪೊಲೀಸರು ತುದಿಗಾಲಿನಲ್ಲಿ ನಿಂತಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಶಾರೀಕ್ ಒಂದು ವೇಳೆ ಸಾವನ್ನಪ್ಪಿದ್ದರೆ ಆತನ ಉಗ್ರ ಚಟುವಟಿಕೆಗಳೂ ಆತನೊಂದಿಗೆ ಸಾಯಲಿದೆ. ಆತ ಈ ಹಿಂದೆ ಏನೆಲ್ಲಾ ಉಗ್ರ ಚಟುವಟಿಕೆ ಮಾಡಿದ್ದ, ಮುಂದೆ ಯಾವ ಪ್ಲಾನ್ ಮಾಡಿದ್ದ, ಆತನೊಂದಿಗಿರುವ ತಂಡ ಯಾವುದು. ಫಂಡಿಂಗ್ ಮಾಡಿದ್ಯಾರು..? ಯಾರೆಲ್ಲಾ ಆಶ್ರಯ ಕೊಟ್ಟಿದ್ದರು, ಉಗ್ರರ ಜೊತೆ ಸಂಪರ್ಕದಲ್ಲಿದ್ನಾ ಅನ್ನೋ ಸಾಕಷ್ಟು ಆಘಾತಕಾರಿ ಮಾಹಿತಿಗಳು ನಾಶವಾಗಲಿದೆ. ಹೀಗಾಗಿ ಆತನನ್ನು ಹೇಗಾದ್ರೂ ಮಾಡಿ ಬದುಕಿಸಲೇಬೇಕೆಂದು ಪೊಲೀಸರು ವೈದ್ಯರು ತಂಡಕ್ಕೆ ಸೂಚಿಸಿದ್ದಾರೆ. ವೈದ್ಯರೂ ಆತನ ಮೇಲೆ ವಿಶೇಷ ಗಮನ ಇಟ್ಟಿದ್ದು ಬದುಕಿಸುವ ಪ್ರಯತ್ನ ಮಾಡುತ್ತಿದ್ದಾರೆ.