LATEST NEWS
ಬೆಂಗಳೂರು ಬಳಿಕ ಮಂಗಳೂರು ಉಡುಪಿಯಲ್ಲೂ 60 ದಾಟಿದ ಎಳನೀರು ರೇಟ್
ಮಂಗಳೂರು ಮೇ 14: ಕರಾವಳಿ ಜಿಲ್ಲೆಗಳಲ್ಲಿ ಬಿಸಿಲ ದಗೆ ಏರುತ್ತಲೇ ಇದ್ದರೆ ಇನ್ನೊಂದೆಡೆ ಬಿಸಿಲ ಬೇಗೆ ತಣಿಸಲುವ ಬೊಂಡ ರೇಟು ಕೂಡ ಏರಿಕೆಯಾಗಿದೆ. 30 ರಿಂದ 35 ಕ್ಕೆ ಸಿಗುತ್ತಿದ್ದ ಬೊಂಡ ಇದೀಗ 60ಕ್ಕೆ ಏರಿಕೆಯಾಗಿದೆ.
ಮಂಗಳೂರು ಹಾಗೂ ಉಡುಪಿಯಲ್ಲಿ ಎಳನೀರಿನ ದರ ಸುಮಾರು 60 ರೂ.ಗೆ ಏರಿಕೆಯಾಗಿದೆ. ಈ ಮಧ್ಯೆ, ಪೂರೈಕೆ ಕೊರತೆಯೂ ಉಂಟಾಗಿದೆ. ಸಾಕಷ್ಟು ಪೂರೈಕೆ ಇಲ್ಲದ ಮತ್ತು ಮಾರಾಟ ಹೆಚ್ಚಿರುವ ಕಾರಣ ಬೆಳಗ್ಗೆ 11 ಗಂಟೆ ಸುಮಾರಿಗೆಲ್ಲ ಮಾರುಕಟ್ಟೆಗೆ ಬಂದಿದ್ದ ಎಳನೀರು ಖಾಲಿಯಾಗಿದ್ದು ದಿನದ ವ್ಯಾಪಾರವೇ ಮುಗಿದಿದೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ.
ಎಳನೀರಿನ ಬೆಲೆಯಲ್ಲಿ ಈ ಮಟ್ಟದ ಏರಿಕೆ ಇದೇ ಮೊದಲು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಮಂಗಳೂರು, ಉಡುಪಿಯಲ್ಲಿ ಎಳನೀರಿನ ದರ 30 ರಿಂದ 35 ರೂ.ಗಳ ಆಸುಪಾಸಿನಲ್ಲಿರುತ್ತದೆ. ಪ್ರಸ್ತುತ, ಕುಂದಾಪುರ ಮತ್ತು ಉಡುಪಿಯಲ್ಲಿ ಎಳನೀರಿಗೆ 60 ರೂ. ಇದ್ದರೆ, ಮಂಗಳೂರಿನಲ್ಲಿ 50 ರಿಂದ 55 ರೂ.ಗೆ ಮಾರಾಟವಾಗುತ್ತಿದೆ. ಎಳನೀರು ದುಬಾರಿಯಾಗಿರುವುದು ಮತ್ತು ಪೂರೈಕೆ ಕೊರತೆಯ ಪರಿಣಾಮವಾಗಿ ಅನೇಕ ಗ್ರಾಹಕರು ಪರ್ಯಾಯವಾಗಿ ಕಬ್ಬಿನ ಜ್ಯೂಸ್ ಆರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಎಳನೀರಿನ ದರ 60 ರೂ. ದಾಟಿತ್ತು. ಜತೆಗೆ ಇತರ ತಾಜಾ ಹಣ್ಣಿನ ಜ್ಯೂಸ್ಗಳ ದರವೂ ಏರಿಕೆಯಾಗಿತ್ತು.