Connect with us

DAKSHINA KANNADA

ಊರಿಗೆಲ್ಲಾ ನೀರಿನ ಭಾಗ್ಯ ನೀಡಿದ ಈ ಕ್ಷೇತ್ರದಲ್ಲಿ ಮಾತ್ರ ನೀರಿಲ್ಲ…. ಯಾಕೆ ಗೊತ್ತೇ ?

ಪುತ್ತೂರು ಮಾರ್ಚ್ 12:  ನೀರಿನ ಸಮಸ್ಯೆ ಇರುವವರು ಈ ದೇವಸ್ಥಾನದಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದಲ್ಲಿ ಮತ್ತೆ ನೀರಿನ ಸಮಸ್ಯೆ ಇರಲ್ಲ. ಆದರೆ ಬಂದ ಭಕ್ತರದ್ದೆಲ್ಲಾ ನೀರನ್ನು ದಯಪಾಲಿಸುವ ಈ ಕ್ಷೇತ್ರದಲ್ಲಿ ಮಾತ್ರ ನೀರಿಲ್ಲ. ಕಳೆದ 500 ವರ್ಷಗಳಿಂದ ಈ ಕ್ಷೇತ್ರದ ಬ್ರಹ್ಮಕಲಶೋತ್ಸವವೇ ನಡೆದಿಲ್ಲ. ಈ ಕ್ಷೇತ್ರದ ವ್ಯಾಪ್ತಿಯ ಭಕ್ತರಿಗೆಲ್ಲಾ ಸಮೃದ್ಧಿ ದಯಪಾಲಿಸಿದ ಈ ಕ್ಷೇತ್ರ ಮಾತ್ರ ಅಜೀರ್ಣಾವಸ್ಥೆಯಲ್ಲಿದೆ. ಈ ಕ್ಷೇತ್ರದ ಬ್ರಹ್ಮಕಲಶ ನಡೆಯದೆಯೇ ಇರಲು ಕಾರಣವೇನು? ಯಾವುದೀ ಶಕ್ತಿಶಾಲಿ‌ ಕ್ಷೇತ್ರ ಅನ್ನೋದನ್ನು ತಿಳಿಯುವ ಹಂಬಲವೇ? ಈ ಸ್ಟೋರಿ ನೋಡಿ…

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಾಂತಿಗೋಡಿನ ಮರಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನವಿದು. ನೂರಾರು ವರ್ಷಗಳ ಇತಿಹಾಸ ಈ ಕ್ಷೇತ್ರಕ್ಕಿದೆ ಅನ್ನೋದು ಈ ಕ್ಷೇತ್ರಕ್ಕೊಮ್ಮೆ ಭೇಟಿ ನೀಡಿದರೆ ಅನ್ನಿಸದಿರದು. ನರಿಮೊಗರು ಗ್ರಾಮಪಂಚಾಯತ್ ವ್ಯಾಪ್ತಿಯ ಶಾಂತಿಗೋಡು ಗ್ರಾಮದಲ್ಲಿ ಮೂರು ವಿಷ್ಣುಮೂರ್ತಿ ದೇವಸ್ಥಾನಗಳಿದ್ದು, ಅವುಗಳಲ್ಲಿ ಪುರಾತನ ಕ್ಷೇತ್ರವಾಗಿ ಮರಕೂರು ಕ್ಷೇತ್ರ ಗುರುತಿಸಿಕೊಂಡಿದೆ. ಕರ್ನಾಟಕ ಸರಕಾರದ ಧಾರ್ಮಿಕ ಧತ್ತಿ ಇಲಾಖೆಯಡಿ ಬರುವ ಈ ದೇವಸ್ಥಾನವು ಸಿ ಗ್ರೇಡ್ ದೇವಸ್ಥಾನವಾಗಿದೆ. ಸಂತಾನ ಭಾಗ್ಯ, ಆರೋಗ್ಯ ಭಾಗ್ಯ ಮತ್ತು ನೀರಿನ ಸಮೃದ್ಧಿಗಾಗಿ ಈ ಕ್ಷೇತ್ರಕ್ಕೆ ಹರಕೆ ಹೊತ್ತು ಭಕ್ತರು ಆಗಮಿಸುತ್ತಾರೆ. ಅದರಲ್ಲೂ ನೀರಿನ ಸಮಸ್ಯೆ ಇರುವ ಜನ ತಮ್ಮ ಮನೆಯಲ್ಲೋ, ತೋಟದಲ್ಲೋ ಬಾವಿ, ಕೆರೆ, ಕೊಳವೆ ಬಾವಿಯನ್ನು ಕೊರೆಯುವ ಮೊದಲು ಈ ಕ್ಷೇತ್ರಕ್ಕೆ ಬಂದು ಹರಕೆ ಹೊತ್ತು ಹೋಗುತ್ತಾರೆ. ಹರಕೆ ಹೊತ್ತ ಭಕ್ತರ ಬೇಡಿಕೆಗೆ ತಕ್ಕಂತೆ ನೀರಿನ ಭಾಗ್ಯವನ್ನು ಈ ಕ್ಷೇತ್ರದ ಆರಾಧ್ಯಮೂರ್ತಿ ನಿರಂತರವಾಗಿ ಕಲ್ಪಿಸಿದ್ದಾನೆ. ಆದರೆ ಊರಿನ ಎಲ್ಲಾ ಭಕ್ತರಿಗೆ ನೀರಿನ ಭಾಗ್ಯ ನೀಡಿದ ಈ ಕ್ಷೇತ್ರದಲ್ಲಿ ಮಾತ್ರ ನೀರಿನ ಮೂಲವೇ ಇಲ್ಲ. ಸ್ಥಳೀಯರ ಪ್ರಕಾರ ಸದ್ಯ ಆರಾಧಿಸಿಕೊಂಡು ಬರಲಾಗುತ್ತಿರುವ ವಿಷ್ಣುಮೂರ್ತಿ ಕ್ಷೇತ್ರ ,ಈ ಕ್ಷೇತ್ರಕ್ಕೆ ಪಕ್ಕದಲ್ಲೇ ಇರುವ ಜಾಗವೊಂದರಲ್ಲಿ ಇತ್ತಂತೆ. ಆದರೆ ಯಾವುದೋ ಒಂದು ಕಾರಣಕ್ಕೆ ಆ ಕ್ಷೇತ್ರಕ್ಕೆ ಬೆಂಕಿ ಬಿದ್ದು ನಾಶವಾಗಿತ್ತಂತೆ.

ಆ ಬಳಿಕ ಸುಮಾರು 500 ವರ್ಷಗಳ ಹಿಂದೆ ಅಲ್ಲಿದ್ದ ದೇವರನ್ನು ಪ್ರಸ್ತುತ ಇರುವ ಸ್ಥಳದಲ್ಲಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಆದರೆ ಪ್ರತಿಷ್ಠಾಪಿಸಿ 500 ವರ್ಷ ಕಳೆದರೂ, ಈ ದೇವರಿಗೆ ಒಂದು ಬಾರಿಯೂ ಬ್ರಹ್ಮಕಲಶೋತ್ಸವ ನಡೆದಿಲ್ಲ. ಇತ್ತೀಚೆಗೆ ನಡೆದ ದೈವಜ್ಞರ ಪ್ರಶ್ನಾಚಿಂತನೆಯಲ್ಲಿ ದೇವರು ಮುನಿಸಿಕೊಂಡಿರುವ ಬಗ್ಗೆ ಸೂಚನೆ. ದೇವರ ಮುನಿಸಿನಿಂದಾಗಿಯೇ ಗ್ರಾಮದಲ್ಲಿ ಹೆಚ್ಚಾದ ಸಿಡಿಲಿನ ಸಮಸ್ಯೆ. ಪ್ರತೀ ವರ್ಷವೂ ಇಲ್ಲಿನ ಒಂದಲ್ಲ ಒಂದು ಅಡಿಕೆ ತೋಟದಲ್ಲಿ ಸಿಡಿದು ಬಡಿಯುತ್ತಿತ್ತು. ಸಿಡಿಲು ಬಡಿದು ತೋಟದ 100 ಕ್ಕೂ ಮಿಕ್ಕಿದ ಅಡಿಕೆ ಮರಗಳು ನಾಶವಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಕ್ಷೇತ್ರಾಧಿಪತಿಯ ಅಸಮಾಧಾನವೇ ಕಾರಣ ಎನ್ನುವುದು ಬೆಳಕಿಗೆ ಬಂದಿದೆ. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ದೋಷಗಳಿಗೆ ಪರಿಹಾರ ಕಲ್ಪಿಸಿದಲ್ಲಿ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ.

ಇದೀಗ ಕ್ಷೇತ್ರವನ್ನು ಸಂಪೂರ್ಣ ಜೀರ್ಣೋದ್ಧಾರ ನಡೆಸಲು ಗ್ರಾಮದ ಜನ ತೀರ್ಮಾನಿಸಿದ್ದು, ಭಕ್ತರ,ದಾನಿಗಳ ಸಹಕಾರದ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದ ಹೆಸರಿನಲ್ಲಿ ಸುಮಾರು 29 ಸೆಂಟ್ಸ್ ಭೂಮಿ ಮಾತ್ರವಿದ್ದು, ಇದೇ ಭೂಮಿಯನ್ನು ಬಳಸಿಕೊಂಡು ಸಂಪೂರ್ಣ ಜೀರ್ಣೋದ್ಧಾರ ಕಾರ್ಯ ನಡೆಯಬೇಕಿದೆ. ಈ ಕ್ಷೇತ್ರದಲ್ಲಿ ಆರಾಧಿಸಲ್ಪಡುವ ವಿಷ್ಣುವಿನ ವಿಗ್ರಹ ದಕ್ಷಿಣಕನ್ನಡ ಜಿಲ್ಲೆಯ ಎತ್ತರದ ಮೂರ್ತಿಗಳಲ್ಲಿ ಒಂದಾಗಿದೆ. ಇದೇ ಕಾರಣಕ್ಕೆ ಎಲ್ಲಾ ಕ್ಷೇತ್ರಗಳ ಬ್ರಹ್ಮಕಲಶೋತ್ಸವಗಳು ಸಂಪನ್ನಗೊಂಡ ಬಳಿಕ ತಾಯಿ ರೂಪದಂತಿರುವ ಈ ಕ್ಷೇತ್ರದ ಆರಾಧ್ಯಮೂರ್ತಿಗೆ ಬ್ರಹ್ಮಕಲಶ ನಡೆಯಲಿದೆ ಎನ್ನುವ ವಿಚಾರವೂ ಪ್ರಶ್ನಾಚಿಂತನೆಯ ಮೂಲಕ ತಿಳಿದು ಬಂದಿದೆ. ಆ ಪ್ರಕಾರ ಇದೀಗ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *