LATEST NEWS
ಸರಕಾರಿ ಕೆಲಸ ಗಿಟ್ಟಿಸಲು ತಂದೆಯನ್ನೇ ಕೊಲೆಗೈದ ಯುವಕ…!!
ಅನುಕಂಪ ಆಧಾರದಲ್ಲಿ ಕೆಲಸ ಗಿಟ್ಟಿಸಲು ಮಗನ ಪ್ಲ್ಯಾನ್
ಕರೀಂನಗರ್ (ತೆಲಂಗಾಣ) , ಜೂನ್ 7, ಕೆಲವರು ಸರಕಾರಿ ಉದ್ಯೋಗಕ್ಕಾಗಿ ಏನೆಲ್ಲ ಕಸರತ್ತು ಮಾಡುತ್ತಾರೆ. ಲಂಚ, ಮೋಸ, ನಕಲಿ ಸರ್ಟಿಫಿಕೇಟ್ ಹೀಗೆ ಏನಾದ್ರೂ ಮಾಡಿ ಕೆಲಸ ಗಿಟ್ಟಿಸಲು ಪ್ರಯತ್ನ ಪಡುತ್ತಾರೆ. ಆದರೆ, ಇಲ್ಲೊಬ್ಬ ಭೂಪ ಅನುಕಂಪದ ನೆಲೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸರಕಾರಿ ಉದ್ಯೋಗದಲ್ಲಿದ್ದ ತನ್ನ ತಂದೆಯನ್ನೇ ಕೊಂದು ಹಾಕಿದ್ದಾನೆ !
ಹೌದು… ಹೀಗೊಂದು ಕೃತ್ಯ ಆಗಿರಬಹುದೆಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದರೆ, ತೆಲಂಗಾಣ ರಾಜ್ಯದ ಕರೀಂನಗರದಲ್ಲಿ ಇಂಥ ಪೈಶಾಚಿಕ ಕೃತ್ಯ ನಡೆದುಹೋಗಿದ್ದು ನೈಜ ವಿಷಯ ತಿಳಿದ ಪೊಲೀಸರೇ ಆಘಾತಗೊಂಡಿದ್ದಾರೆ.
ಪಾಲಿಟೆಕ್ನಿಕ್ ಡಿಪ್ಲೊಮಾ ಪೂರೈಸಿದ್ದ 25 ವರ್ಷದ ಯುವಕ, 55 ವರ್ಷದ ತನ್ನ ತಂದೆಯನ್ನು ಕುತ್ತಿಗೆಗೆ ಟವೆಲ್ ಬಿಗಿದು ಕೊಲೆ ಮಾಡಿದ್ದಾನೆ. ಮನೆಯಲ್ಲೇ ಘಟನೆ ನಡೆದಿದ್ದು ಮಗನ ಕೃತ್ಯಕ್ಕೆ ತಾಯಿ ಮತ್ತು ಆತನ ತಮ್ಮನೂ ಬೆಂಬಲ ನೀಡಿದ್ದಾರೆ. ಟವೆಲ್ ಬಿಗಿದು ಕೊಲೆಗೈದ ಬಳಿಕ ಮರುದಿನ ತನ್ನ ತಂದೆ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರಲ್ಲಿ ತಿಳಿಸಿದ್ದಾನೆ. ಆದರೆ, ಸ್ಥಳೀಯ ಕೆಲವರಿಗೆ ಯುವಕನ ಹೇಳಿಕೆಯ ಬಗ್ಗೆ ನಂಬಿಕೆ ಬರಲಿಲ್ಲ. ಹೀಗಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಪೋಸ್ಟ್ ಮಾರ್ಟಂ ಮಾಡಿಸಿದಾಗ ಕೃತ್ಯದ ಹಿಂದೆ ಯಾರದ್ದೋ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಬಳಿಕ ಮಗನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ವಿಚಾರ ಬಯಲಾಗಿದೆ.
ಕರೀಂನಗರದ ಬಳಿಯ ಪೆದ್ದಪಳ್ಳಿ ಜಿಲ್ಲೆಯ ಕೊತ್ತೂರ್ ಗ್ರಾಮದ ನಿವಾಸಿಯಾಗಿರುವ ಮೃತ ವ್ಯಕ್ತಿ ರಾಜ್ಯ ಸರಕಾರದ ಅಧೀನದಲ್ಲಿರುವ ಸಿಂಗಾರೇನಿ ಕೊಲಿಯರೀಸ್ ಲಿಮಿಟೆಡ್ ಎಂಬ ಗಣಿ ಕಂಪನಿಯಲ್ಲಿ ಪಂಪ್ ಆಪರೇಟರ್ ಆಗಿ ಕೆಲಸಕ್ಕಿದ್ದ. ಮೇ 26ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಮಗ ಕುತ್ತಿಗೆಗೆ ಟವೆಲ್ ಬಿಗಿದು ಕೊಲೆ ಮಾಡಿದ್ದ. ಮರುದಿನ ಅಂತ್ಯಕ್ರಿಯೆಗೆ ರೆಡಿ ಮಾಡುತ್ತಿದ್ದ ವಿಚಾರ ತಿಳಿದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೊಲೆ ವಿಚಾರ ತಿಳಿದ ಪೊಲೀಸರು ಆರೋಪಿ ಯುವಕ ಮತ್ತು ಆತನ ತಮ್ಮನನ್ನು ಬಂಧಿಸಿದ್ದಾರೆ. ಯುವಕನ ತಾಯಿ ತಲೆಮರೆಸಿಕೊಂಡಿದ್ದಾರೆ.
‘”ಸಿಂಗಾರೇನಿ'” ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿದ್ದ ಕಂಪೆನಿಯಾಗಿದ್ದು ರಾಜ್ಯ ಮತ್ತು ಕೇಂದ್ರ ಸರಕಾರದ ಜಂಟಿ ಪಾಲುದಾರಿಕೆಯನ್ನು ಹೊಂದಿದೆ. ಕೆಲಸಗಾರರು ವೃತ್ತಿಯಲ್ಲಿ ಇರುವಾಗಲೇ ಮೃತಪಟ್ಟರೆ ವ್ಯಕ್ತಿಯ ಕುಟುಂಬಸ್ಥರಿಗೆ ಅನುಕಂಪದ ಆಧಾರದಲ್ಲಿ ಕಂಪೆನಿಯಲ್ಲಿ ಉದ್ಯೋಗ ನೀಡಲಾಗ್ತಿತ್ತು. ತಂದೆಯ ನೌಕರಿ ತನಗೆ ಸಿಗುವುದಕ್ಕಾಗಿ ಯುವಕ ತನ್ನ ತಂದೆಯನ್ನೇ ಮುಗಿಸಿಬಿಟ್ಟಿದ್ದಾನೆ ಎಂದು ರಾಮಗುಂಡಂ ಪೊಲೀಸ್ ಕಮಿಷನರ್ ವಿ. ಸತ್ಯನಾರಾಯಣ ತಿಳಿಸಿದ್ದಾರೆ.