UDUPI
ವಿದ್ಯಾರ್ಥಿ ಬದುಕಿನ ಮೌಲ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ: ರಘುಪತಿ ಭಟ್
ಸೆಪ್ಟೆಂಬರ್ 5: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದು ಈ ವೃತ್ತಿಯಲ್ಲಿ ಸಿಗುವ ಗೌರವ,ಪ್ರೀತಿ,ಆದರಗಳು ಬೇರೆ ಯಾವುದೇ ವೃತ್ತಿಯಲ್ಲಿ ಸಿಗಲು ಸಾಧ್ಯವಿಲ್ಲ.ವಿದ್ಯಾರ್ಥಿಗಳ ಬದುಕಿನ ಮೌಲ್ಯವನ್ನು ರೂಪಿಸುದರಲ್ಲಿ ಶಿಕ್ಷಕರ ಪಾತ್ರ ಮುಖ್ಯ ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಶನಿವಾರ ಉಡುಪಿಯ ಸೈಂಟ್ ಸಿಸಿಲಿಸ್ ಪ್ರೌಢಶಾಲೆಯಲ್ಲಿ , ಉಡುಪಿ ಜಿಲ್ಲಾ ಪಂಚಾಯತ್ , ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ವರ್ಷದ ರಾಜ್ಯಮಟ್ಟದ ಶಿಕ್ಷಕರ ಸಮಾವೇಶವನ್ನು ಉಡುಪಿ ಜಿಲ್ಲೆಯಲ್ಲಿ ಮಾಡಬೇಕು ಎಂದು,ಡಾ ಜಿ ಶಂಕರ್ ಅವರೊಂದಿಗೆ ಮನವಿ ಮಾಡಲಾಗಿತ್ತು, ಆದರೆ ಕೊರೋನಾ ಕಾರಣದಿಂದಾಗಿ ಮಾಡಲು ಸಾಧ್ಯವಾಗಲಿಲ್ಲ. ಮುಂದಿನ ವರ್ಷದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಯಾ ಶಾಲೆಯ ಮಕ್ಕಳಿಂದ ಆಚರಿಸಿ ನಂತರದಲ್ಲಿ ತಾಲೂಕು ಜಿಲ್ಲಾ ಮಟ್ಟದಲ್ಲಿ ಆಚರಣೆ ಮಾಡಿಕೊಳ್ಳಬೇಕು. ಶಿಕ್ಷಕರ ಪ್ರಮುಖ್ಯತೆಯನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಬೇಕಾದರೆ ಪ್ರತಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳು ಜೊತೆಗೂಡಿ ಆಚರಿಸಿಕೊಳ್ಳಬೇಕು ಎಂದರು.
ಎಸ್‍ಎಲ್‍ಎಲ್‍ಸಿ ಯಲ್ಲಿ ಮುಂದಿನ ವರ್ಷದಲ್ಲಿ ಪ್ರಥಮ ಸ್ಥಾನ ಬರಲು ಶಿಕ್ಷಕರ ಪ್ರಯತ್ನವು ಬೇಕಾಗಿದೆ. ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟದೊಂದಿಗೆ ಒಳ್ಳೆಯ ಶಿಕ್ಷಣ ವ್ಯವಸ್ಥೆಯು ಇಲ್ಲಿದೆ. ಶಿಕ್ಷಕರ ಜವಾಬ್ದಾರಿ ಒತ್ತಡಗಳು ಇನ್ನಷ್ಟು ಹೆಚ್ಚಾಗಿವೆ. ಶಿಕ್ಷಣದಲ್ಲಿ ಬದಲಾವಣೆ ಬೇಕಿದೆ, ಶಿಕ್ಷಕರು ಹೊಸ ಚಟುವಟಿಕೆ, ಬೋಧನೆ ಶೈಲಿ, ಅಭ್ಯಾಸಗಳನ್ನು ರೂಢಿಸಿಕೊಂಡರೆ ಮಾತ್ರ ಮಕ್ಕಳಿಗೆ ತಿಳಿಸಿಕೊಡಲು ಸಾಧ್ಯ ಎಂದರು.
ಜಿಲ್ಲಾಧಿಕಾರಿ ಜಿ ಜಗದೀಶ್ ಪ್ರಸ್ತಾವಿಕ ಮಾತುಗಳನ್ನಾಡಿ , ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ಶಿಕ್ಷಕರು ಮಹತ್ತರವಾದ ಜವಾಭ್ದಾರಿಯನ್ನು ಹೊಂದಿದ್ದಾರೆ. ಶಿಕ್ಷಕರಾದವರು ಸರ್ವಪಲ್ಲಿ ರಾಧಕೃಷ್ಣನ್ ಮತ್ತು ಅಬ್ದುಲ್ ಕಲಾಂ ಅವರ ದಾರಿಯನ್ನು ರೂಢಿಸಿಕೊಳ್ಳಿ ಎಂದರು. ಕರೋನಾ ಸಮಯದಲ್ಲಿ ಜಿಲ್ಲಾಡಳಿತದೊಂದಿಗೆ ಶಿಕ್ಷಕರು ಕೈಜೋಡಿಸಿ ಸಹಕರಿಸಿದ್ದಾರೆ. ಮಕ್ಕಳಿಗೆ ಭೋದನೆಯನ್ನು ಮಾಡಲು ಆಸಕ್ತಿ ಇಲ್ಲದವರು ,ನಿರಂತರ ಆಧ್ಯಯನ ಮಾಡದವರು ಶಿಕ್ಷಕರೆನಿಸಿಕೊಳ್ಳಲು ಸಾಧ್ಯವಿಲ್ಲ. ಮಕ್ಕಳನ್ನು ತನ್ನ ಮನೆಯವರಿಗಿಂತ ಹೆಚ್ಚು ಪ್ರೀತಿಸಿದ್ದಲ್ಲಿ, ಮಕ್ಕಳ ಮನಸ್ಸನ್ನು ಗೆದ್ದಲ್ಲಿ ಅವರು ಆದರ್ಶ ಪ್ರಿಯ ಶಿಕ್ಷಕರಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ, ಜಿಲ್ಲಾ ಪ್ರಶಸ್ತಿ ವಿಜೇತರಿಗೆ ಹಿಂದಿನ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸಲಾಯಿತು.