Connect with us

    DAKSHINA KANNADA

    ಕೊರೊನಾ ಹೊಡೆತ…. ಜೀವನ ನಿರ್ವಹಣೆಗೆ ಆಹಾರ ಉದ್ಯಮಕ್ಕೆ ಇಳಿದ ಶಿಕ್ಷಕರು…!!

    ಪುತ್ತೂರು : ಕೊರೊನಾ ಇಡೀ ವಿಶ್ವದ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಬಹುತೇಕ ಎಲ್ಲಾ ವರ್ಗದವರ ಆರ್ಥಿಕ ಸ್ಥಿತಿನಯನ್ನು ಅದೋಗತಿಗೆ ತಂದ ಕೊರೊನಾ,ಕೊರೊನಾ ಬಳಿಕದ ಬೆಳವಣಿಗೆಯು ಹಲವರ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಶಾಲೆಯಲ್ಲಿ ಮಕ್ಕಳಿಗೆ ಮುಂದಿನ ಜೀವನದ ಬಗ್ಗೆ ಪಾಠ ಹೇಳಿಕೊಡುತ್ತಿರುವ ಶಿಕ್ಷಕರಿಗೆ ಈಗ ತಮ್ಮ ಜೀವನ ನಿರ್ವಹಣೆ ಸವಾಲಾಗಿ ಪರಿಣಮಿಸಿದ್ದು, ಶಾಲೆಯಲ್ಲಿ ಮಕ್ಕಳಿಗೆ ಪೆನ್ನು, ಪುಸ್ತಕ, ಚಾಕ್ ಹಿಡಿದು ಪಾಠ ಮಾಡುತ್ತಿದ್ದ ಶಿಕ್ಷಕರಿಗೆ ಈಗ ಕೈಗೆ ಬಾಣಲೆ, ಸೌಟು ಬಂದಿದೆ.


    ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಶಿಕ್ಷಕರು ಪೆನ್ನು, ಪುಸ್ತಕದ ಜೊತೆಗೆ ಸೌಟು, ಬಾಣಲೆಯನ್ನೂ ಹಿಡಿಯಲು ಆರಂಭಿಸಿದ್ದಾರೆ. ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ಸುಮಾರು 90 ಕ್ಕೂ ಮಿಕ್ಕಿದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿದ್ದು, ಇವರಿಗೆ ಸಂಬಳ ನೀಡುವುದೇ ಶಿಕ್ಷಣ ಸಂಸ್ಥೆಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳ ಫೀಸ್ ಹಣದಿಂದಲೇ ಸಂಸ್ಥೆ ನಡೆಸುತ್ತಿರುವ ಈ ಸಂಸ್ಥೆಗೆ ಸಂಕಷ್ಟವನ್ನು ಮನಗಂಡ ಶಿಕ್ಷಕರು ಶಾಲಾ ಕೊಠಡಿಯಲ್ಲಿ ಇದೀಗ ಆಹಾರ ಉದ್ಯಮವೊಂದನ್ನು ಆರಂಭಿಸಿದ್ದಾರೆ. ಹಲಸಿನ ಚಿಪ್ಸ್, ಹಲಸಿನ ಬೀಜದ ಲಡ್ಡು ಹೀಗೆ ವಿವಿಧ ಪ್ರಕಾರದ ತಿಂಡಿ-ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡಲು ಆರಂಭಿಸಿದ್ದು, ಶಿಕ್ಷಕರಿಗೆ ಸಂಸ್ಥೆಯ ವತಿಯಿಂದಲೇ ಎಲ್ಲಾ ಸೌಕರ್ಯಗಳನ್ನು ಮಾಡಿಕೊಡಲಾಗಿದೆ. ಸಂಸ್ಥೆಯಲ್ಲಿ ದುಡಿಯುತ್ತಿರುವ ಹಲವು ಶಿಕ್ಷಕರ ಆರ್ಥಿಕ ಸಮಸ್ಯೆಯನ್ನು ಎದುರಿಸುವ ಕುಟುಂಬಗಳಿಂದಲೇ ಬಂದವರಾಗಿದ್ದು, ತಿಂಡಿ-ತಿನಿಸುಗಳ ಮಾರಾಟದಿಂದ ಬಂದ ಹಣವನ್ನು ಹಂಚಿಕೊಳ್ಳಲು ಈ ಶಿಕ್ಷಕರು ತೀರ್ಮಾನಿಸಿದ್ದಾರೆ. ತಿಂಡಿ ತಿನಿಸುಗಳಿಗೆ ಹೆಚ್ಚಿನ ಬೇಡಿಕೆ ಬಂದಲ್ಲಿ ಆನ್ ಲೈನ್ ಮೂಲಕವೂ ಮಾರಾಟ ಮಾಡುವ ಯೋಜನೆಯನ್ನೂ ಶಿಕ್ಷಕರು ಹಾಕಿಕೊಂಡಿದ್ದಾರೆ.


    ಶಿಕ್ಷಕರ ಈ ನಿರ್ಧಾರಕ್ಕೆ ಶಾಲೆಯ ಆಡಳಿತ ಮಂಡಳಿಯೂ ಎಲ್ಲಾ ಸಹಕಾರಗಳನ್ನೂ ನೀಡಿದೆ. ಆಹಾರ ಉತ್ಪನ್ನಗಳ ತಯಾರಿಕೆಗೆ 50 ಸಾವಿರ ರೂಪಾಯಿಗಳ ಮೊದಲ ಬಂಡವಾಳವನ್ನು ಸಂಸ್ಥೆಯೇ ನೀಡಿದೆ. ಅಲ್ಲದೆ ತಿಂಡಿ-ತಿನಿಸುಗಳನ್ನು ತಯಾರಿಸಲು ಶಾಲಾ ಕೊಠಡಿಗಳನ್ನು, ವಿದ್ಯುತ್ ಸಂಪರ್ಕ, ಗ್ಯಾಸ್ ಒಲೆಗಳ ವ್ಯವಸ್ಥೆಯನ್ನು ನೀಡಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಶಿಕ್ಷಕರು ತಯಾರಿಸುವ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ತಲುಪಿಸಲು ಬೇಕಾದ ವಾಹನದ ವ್ಯವಸ್ಥೆಯನ್ನೂ ಶಿಕ್ಷಣ ಸಂಸ್ಥೆಯೇ ನೀಡಲು ಮುಂದಾಗಿದೆ. ಕೋಟ್ಯಾಂತರ ರೂಪಾಯಿ ಸಾಲ ಮಾಡಿ ಕಟ್ಟಿದಂತಹ ಶಿಕ್ಷಣ ಸಂಸ್ಥೆಗೆ ಬ್ಯಾಂಕ್ ಸಾಲದ ಜೊತೆಗೆ ಸಿಬ್ಬಂದಿಗಳ ಸಂಬಳ ನೀಡಲೂ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಈ ರೀತಿಯ ವ್ಯವಸ್ಥೆಗಳು ಅನಿವಾರ್ಯವೂ ಆಗಿದೆ.


    ಶಿಕ್ಷಕರ ಸಂಬಳ ನೀಡಲಾಗದೆ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ಅರ್ಧ ದಾರಿಯಲ್ಲೇ ಕೈ ಬಿಟ್ಟ ಉದಾಹರಣೆಗಳು ಸಾಕಷ್ಟಿವೆ. ಆದರೆ ಪುತ್ತೂರಿನ ಈ ಶಿಕ್ಷಣ ಸಂಸ್ಥೆ ತನ್ನ ಜೊತೆ ದುಡಿಯುವ ಶಿಕ್ಷಕರನ್ನು ನಡು ದಾರಿಯಲ್ಲಿ ಕೈ ಬಿಡದೆ, ಶಿಕ್ಷಕರನ್ನೂ ಆರ್ಥಿಕ ಸ್ವಾವಲಂಭಿಗಳನ್ನಾಗಿ ಮಾಡುವ ಕಾರ್ಯದಲ್ಲಿ ಮುಂದಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *