Connect with us

  ವೇತನ ತೆರಿಗೆ ಕಡಿತ ಚಿಂತೆ ಬಿಡಿ ತೆರಿಗೆ ಉಳಿಸಿ

  ನಮ್ಮ ದೇಶದಲ್ಲಿ ಹೆಚ್ಚಿನ ಜನರು ತಿಂಗಳ ವೇತನದ ಮೇಲೆಯೇ ಜೀವನ ನಡೆಸುತ್ತಿರುವುದರಿಂದ ತಿಂಗಳು ಮುಗಿಯುವುದನ್ನೆ ಕಾಯುತ್ತಿರುತ್ತೇವೆ. ಅದರಲ್ಲೂ ತಿಂಗಳ ಸಂಬಳದ ಮೇಲೆ ತೆರಿಗೆ ಎಂದರೆ ಬೇಸರ ವಿಷಯ ಅಲ್ಲವೇ ? ತೆರಿಗೆ ಉಳಿಸಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ! ನಿಮ್ಮ ವೇತನದಿಂದ ಪ್ರತೀ ತಿಂಗಳು ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾಗುತ್ತಿದ್ದರೆ (TDS) ಕೆಲವೊಂದು ತೆರಿಗೆ ಉಳಿಸುವ ವಿಧಾನವನ್ನು ಅನುಸರಿಸಿ. ಕೆಲವರು ಅಗತ್ಯಕ್ಕಿಂತ ಹೆಚ್ಚಾಗಿ ಜೀವ ವಿಮೆಯಲ್ಲೋ ಅಥವಾ ಇನ್ನಿತರ ರೀತಿಯಲ್ಲಿ ಬಂಡವಾಳ ಹೂಡಿಕೆ ಮಾಡುತ್ತಾರೆ. ನಿಮಗೆಕೆಲವೊಂದು ಅತ್ಯಂತ ಪರಿಣಾಮಕಾರಿಯಾಗಿ ಉಳಿತಾಯ ಮಾಡಬೇಕಾದರೆ ಈ ಲೇಖನ ನೀವು ಓದಲೇ ಬೇಕು.

  ೧. ಮನೆಯ ಬಾಡಿಗೆ :

  ನೀವೇನಾದರೂ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರೆ ಮನೆ ಬಾಡಿಗೆಯ ವೆಚ್ಚವನ್ನು ನಿಮ್ಮ ಆದಾಯದಿಂದ ಕಳೆಯಬಹುದು. ಇದಕ್ಕಾಗಿ ಮನೆಯ ಮಾಲೀಕರಿಂದ ಬಾಡಿಗೆ ಒಪ್ಪಂದದ ಕರ ಪತ್ರ ಹಾಗು ಪ್ರತೀ ತಿಂಗಳು ಬಾಡಿಗೆ ಕೊಡುವ ದಾಖಲೆಯನ್ನು ಪಡೆದುಕೊಳ್ಳಿ. ನಂತರ ಇದನ್ನು  ಆದಾಯ ತೆರಿಗೆಯ ನಿಯಮ ಪ್ರಕಾರ ವೇತನದಿಂದ ಈ ರೀತಿ ಕಳೆಯಬಹುದು.

  ಸೆಕ್ಷನ್‌ 10 (13ಎ) ಮನೆ ಬಾಡಿಗೆ ಭತ್ಯೆ ಪಡೆದಾಗ:

  ಎ) ನಿಜವಾಗಿ ಸಿಕ್ಕಿರುವ ಮನೆಬಾಡಿಗೆ

  ಬಿ) ಸಂಬಳದ ಶೇ 10 ರಷ್ಟು ಬಾಡಿಗೆ ಕೊಟ್ಟಾಗ

  ಸಿ) ಶೇ 40 ರಷ್ಟು ಸಂಬಳ (ಮಹಾನಗರಗಳಲ್ಲಿ ಶೇ 50)

  ಮೇಲಿನವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಆರಿಸಿಕೊಳ್ಳಿ.

  ೨. ಸಾರ್ವಜನಿಕ ಭವಿಷ್ಯ ನಿಧಿ (PPF)

  ಯಾರು ಬೇಕಾದರೂ ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹಣ ಹೂಡಬಹುದು. ಆದಾಯ ತೆರಿಗೆ ವಿಭಾಗ ೮೦ಸಿ ಪ್ರಕಾರ ನೀವು 1.5 ಲಕ್ಷ ರೂಪಾಯಿ ವರೆಗೆ ಜಮಾ ಮಾಡಲು ಅವಕಾಶವಿದೆ

  ೩. ಸುಕನ್ಯ ಸಮೃದ್ಧಿ ಯೋಜನೆ:

  ನವಜಾತ ಶಿಶುವಿನಿಂದ ಹಿಡಿದು 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಖಾತೆ ತೆರೆಯುವ ಸಂದರ್ಭದಲ್ಲಿ ಮಗುವಿನ ಜನನ ಪ್ರಮಾಣ ಪತ್ರ, ಪೋಷಕರ ಗುರುತಿನ ಚೀಟಿ, ವಿಳಾಸ ದೃಢೀಕರಣ ದಾಖಲೆಗಳು ಅಗತ್ಯವಾಗಿವೆ.ಖಾತೆ ತೆರೆಯಲು ಆರಂಭಿಕ ಠೇವಣಿ 1000 ರೂ.. ಪ್ರತಿವರ್ಷ ಖಾತೆಗೆ ಕನಿಷ್ಠ 1000 ರೂ. ಜಮಾ ಮಾಡಬೇಕು. ಪ್ರತಿ ಹಣಕಾಸು ವರ್ಷದಲ್ಲಿ 1000 ರೂ.ನಿಂದ ಗರಿಷ್ಠ 1.5 ಲಕ್ಷ ರೂಪಾಯಿ ವರೆಗೆ ಜಮಾ ಮಾಡಲು ಅವಕಾಶವಿದೆ. ಹೂಡಿಕೆ ಮಾಡಿದ ಮೊತ್ತಕ್ಕೆ ವಾರ್ಷಿಕವಾಗಿ ಬಡ್ಡಿ, ಚಕ್ರಬಡ್ಡಿ ನೀಡಲಾಗುತ್ತದೆ. ಪ್ರಸಕ್ತ ಬಡ್ಡಿ ದರ ಶೇ 9.10%.ಇದೊಂದು ದೀರ್ಘಕಾಲಿನ ಉಳಿತಾಯ ಖಾತೆಯಾಗಿದೆ. ಸುಕನ್ಯಾ ಸಮೃದ್ಧಿ ಉಳಿತಾಯ ಖಾತೆಯು ಆರಂಭಗೊಂಡ ದಿನದಿಂದ 21 ವರ್ಷದವರೆಗೂ ಚಾಲ್ತಿಯಲ್ಲಿರುತ್ತದೆ. ಯಾವ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಲಾಗಿದೆಯೋ ಆಕೆಗೆ 18 ವರ್ಷ ಪೂರ್ಣಗೊಂಡ ನಂತರ, ಆಕೆಯು ತನ್ನ ಖಾತೆಯಲ್ಲಿ ಜಮಾ ಆದ ಹಣದಲ್ಲಿ ಅರ್ಧ ಭಾಗವನ್ನು ಉನ್ನತ ಶಿಕ್ಷಣ, ಮದುವೆಯ ಉದ್ದೇಶಕ್ಕೆ ಬಳಸಬಹುದು.

  ೪. ಬಂಡವಾಳ ಲಾಭ ತೆರಿಗೆ (Capital Gain Tax)

  ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಸೆಕ್ಷನ್‌ 48 ಆಧಾರದ ಮೇಲೆ– ಚಿನ್ನದ ಬಾಂಡುಗಳು ಹಳ್ಳಿ ವ್ಯವಸಾಯದ ಭೂಮಿ ಹಾಗೂ ಸ್ವಂತ ಉಪಯೋಗದ ಒಡವೆಗಳಿಗೆ ಅನ್ವಯಸುವುದಿಲ್ಲ. ಸೆಕ್ಷನ್‌ 54EC ಆಧಾರದ ಮೇಲೆ ಗರಿಷ್ಠ ₹ 50  ಲಕ್ಷ.

  ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಗ್ರಾಮೀಣ ವಿದ್ಯುದ್ದೀಕರಣ ನಿಗಮ ನ್ಯಾಷನಲ್‌ ಹೈವೇಸ್‌ ಅಥಾರಿಟಿ ಆಫ್‌ ಇಂಡಿಯಾ ಅಥವಾ ರೂರಲ್‌ ಎಲೆಕ್ಟ್ರಿಫಿಕೇಷನ್‌ಕಾರ್ಪರೇಷನ್‌ ಇವುಗಳಲ್ಲಿ 3 ವರ್ಷಗಳ ಅವಧಿಗೆ ಇರಿಸಿ, ತೆರಿಗೆ ವಿನಾಯತಿ ಪಡೆಯಬಹುದು.

  ವಿ.ಸೂ.: ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಲೆಕ್ಕ ಹಾಕುವಾಗ, ಬರುವ ಲಾಭದಲ್ಲಿ ಹಣದುಬ್ಬರ ಸೂಚ್ಯಂಕ ವೆಚ್ಚದ (Cost Inflation Index) ಕಳೆದು ತೆರಿಗೆ ಸಲ್ಲಿಸಬಹುದು. 2001–02 ಆಧಾರ ವರ್ಷ (100) ಎಂಬುದಾಗಿ ಇಟ್ಟುಕೊಂಡಲ್ಲಿ 2017–18ರಲ್ಲಿ ಇದು 267 ಆಗಿರುತ್ತದೆ. ಈ ಹೊಸ ನಿಯಮ ೦೧-೦೪-೨೦೧೮ ರಿಂದ ಜಾರಿಗೆ ಬರಬಹುದು.

  ೫. ಮ್ಯೂಚುವಲ್ ಫಂಡ್ ಟ್ಯಾಕ್ಸ್ ಸೇವಿಂಗ್  SIP

  ಇದು ಆರ್ ಡಿ ಕಟ್ಟಿದಷ್ಟೇ ಸುಲಭ. ಬ್ಯಾಂಕ್ ಎಫ್ ಡಿಗಿಂತ ಅಧಿಕ ಮೊತ್ತದ ರಿಟರ್ನ್ಸ್ ಬೇಕು ಎಂದಾದರೆ ಈಕ್ವಿಟಿ ಮಾರುಕಟ್ಟೆಗೆ ಇಳಿಯಿರಿ. ನಿಮಗೆ ಸಂಬಳ ನೀಡುವ ಬ್ಯಾಂಕ್ ನಲ್ಲೇ ಸಣ್ಣಪ್ರಮಾಣದ ಹೂಡಿಕೆ ಬಗ್ಗೆ ಚರ್ಚಿಸಿ. ಮಾರುಕಟ್ಟೆ ಏರಿಳಿತದ ಮೇಲೆ ಆದಾಯ ಆಧಾರವಾಗಿರುವುದರಿಂದ ಕೊಂಚ ರಿಸ್ಕ್ ಇದ್ದೇ ಇರುತ್ತದೆ. ಆದಾಯ ತೆರಿಗೆ ವಿಭಾಗ ೮೦ಸಿ ಪ್ರಕಾರ ನೀವು 1.5ಲಕ್ಷ ರೂಪಾಯಿ ವರೆಗೆ ಜಮಾ ಮಾಡಲು ಅವಕಾಶವಿದೆ.

  ೬. ಆರೋಗ್ಯ ವಿಮಾ ಯೋಜನೆ

  ತೆರಿಗೆ ಉಳಿತಾಯಕ್ಕೆ ಆರೋಗ್ಯ ವಿಮೆ ಅತ್ಯುತ್ತಮವಾದ ಯೋಜನೆ. ನಿಮಗೆ, ಪತ್ನಿಗೆ ಮತ್ತು ಅವಲಂಬಿತರಿಗಾಗಿ ರೂಪಿಸಿರುವ ಆರೋಗ್ಯ ವಿಮೆಯ ಪ್ರಿಮಿಯಂ ಅನ್ನು ನಿಮ್ಮ ಆದಾಯದಲ್ಲಿಕಡಿತವಾಗುತ್ತದೆ. ₹ 25 ಸಾವಿರವರೆಗೂ ಆದಾಯದಲ್ಲಿ ಕಡಿತ ಮಾಡಬಹುದು. ನಿಮ್ಮ ಪೋಷಕರಿಗೂ ಆರೋಗ್ಯ ವಿಮೆ ಮಾಡಿಸಿದ್ದರೆ ಹೆಚ್ಚುವರಿಯಾಗಿ ₹ 25 ಸಾವಿರ ಕಡಿತ ಮಾಡಲುಅವಕಾಶ ದೊರೆಯುತ್ತದೆ. ಇದರಿಂದ   ₹ 50 ಸಾವಿರದವರೆಗೂ ಕಡಿತ ಮಾಡಲು ಅವಕಾಶ ಸಿಗುತ್ತದೆ. ಹಿರಿಯ ನಾಗರಿಕರಿದ್ದರೆ ₹ 25ಸಾವಿರ ಬದಲಾಗಿ ₹ 30 ಸಾವಿರದವರೆಗೆ ಕಡಿತಮಾಡಬಹುದು.

  ೭. ಮನೆ ಸಾಲ ಪಾವತಿ

  ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಪಡೆದಿರುವ ಸಾಲ ಮರುಪಾವತಿಗೆ ಜಮಾ ಮಾಡುವ ಮೊತ್ತವನ್ನು ಸಹ ಆದಾಯದಿಂದ ಕಡಿತ ಮಾಡಬಹುದಾಗಿದೆ. ಮನೆ ಸಾಲಕ್ಕೆ ಬಡ್ಡಿಪಾವತಿಸುವವರಾಗಿದ್ದರೆ ದೊಡ್ಡ ತೆರಿಗೆ ಉಳಿತಾಯ ಮಾಡಬಹುದು. ₹ 2 ಲಕ್ಷದವರೆಗೆ ಮನೆ ಸಾಲದ ಬಡ್ಡಿಯನ್ನು ಪಾವತಿಸಲು ಆದಾಯದಿಂದ ಕಡಿತಗೊಳಿಸಲು ಅವಕಾಶವಿದೆ. ಆದರೆ, ಸಾಲವನ್ನು ಮನೆ ಖರೀದಿಸಲು ಅಥವಾ ನಿರ್ಮಾಣಕ್ಕೆ ಪಡೆದಿರಬೇಕು. ಜತೆಗೆ ಕಟ್ಟಡದ ನಿರ್ಮಾಣವನ್ನು ಐದು ವರ್ಷಗಳವರೆಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಕೇವಲ ₹ 30ಸಾವಿರದವರೆಗೆಮಾತ್ರ ಕಡಿತಗೊಳಿಸಲು ಅವಕಾಶ ದೊರೆಯುತ್ತದೆ.

   

  ೮. ಟ್ಯೂಷನ್‌ ವೆಚ್ಚ:

  ಯಾವುದೇ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಪಾವತಿಸುವ ಟ್ಯೂಷನ್‌ ಶುಲ್ಕವು ಆದಾಯದಿಂದ ಕಡಿತವಾದದ್ದು ಎಂದು ಪರಿಗಣಿಸಲಾಗುತ್ತದೆ. ಈ ನಿಯಮವು ಇಬ್ಬರು ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ.

   

  ಯಾವುದೇ ರೀತಿಯ ಹೂಡಿಕೆಗೂ ಮುನ್ನ ಬಂಡವಾಳ ಹೂಡಿಕೆ ವಿಧಾನ ಬಗ್ಗೆ ಪೂರ್ವ ಮಾಹಿತಿ ಇಲ್ಲದೆ ಮುಂದುವರೆಯಬೇಡಿ. ಹನಿ ಹನಿಗೂಡಿದರೆ ಹಳ್ಳ ಎಂಬ ಗಾದೆ  ಮಾತಿನಂತೆ ಸಣ್ಣಮೊತ್ತದಿಂದಲೇ ಹಣ ಉಳಿತಾಯ ಮಾಡಲು ಶುರು ಮಾಡಿ.

   

  ಸಚಿನ್ ಕೃಷ್ಣ ಭಟ್
  ವ್ಯವಹಾರ ಮತ್ತು ಖಾತೆ ವಿಭಾಗ.
  Share Information
  Advertisement
  Click to comment

  You must be logged in to post a comment Login

  Leave a Reply