LATEST NEWS
ಕೇರಳ ಗಡಿ ಪ್ರದೇಶದಲ್ಲಿ ಬಿಗಿ ಭದ್ರತೆ – ತಲಪಾಡಿಯಲ್ಲಿ ಪೊಲೀಸ್ ತಪಾಸಣೆ

ಮಂಗಳೂರು ಜುಲೈ 30: 10 ದಿನಗಳ ಅಂತರದಲ್ಲಿ ಮೂರು ಹತ್ಯೆಗಳಾದ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೀಗ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.
ತಲಪಾಡಿ ಗಡಿಯಲ್ಲಿ ಕೇರಳದಿಂದ ಮಂಗಳೂರು ಕಡೆಗೆ ಬರುವ ವಾಹನಗಳ ತಪಾಸಣೆಯನ್ನು ನಡೆಸುತ್ತಿದೆ. ಮಂಗಳೂರಿನಿಂದ ಕೇರಳ ಕಡೆಗೆ ಸಂಚರಿಸುವ ವಾಹನಗಳನ್ನು ಕೇರಳ ಪೊಲೀಸರು ತಪಾಸಣೆ ಆರಂಭಿಸಿದ್ದಾರೆ.

ಕೇರಳ- ಕರ್ನಾಟಕ ಗಡಿಭಾಗವಾಗಿರುವ ತಲಪಾಡಿ, ದೇವಿಪುರ, ನೆತ್ತಿಲಪದವು ಬಳಿ ತಪಾಸಣೆ ನಡೆಸುತ್ತಿದ್ದು, ನೆತ್ತಿಲಪದವು ಕೆದುಂಬಾಡಿಯಲ್ಲಿ ಕೊಣಾಜೆ ಪೊಲೀಸರು ತಪಾಸಣೆ ನಡೆಸಿದರೆ, ರಾಷ್ಟ್ರೀಯ ಹೆದ್ದಾರಿ 66 ತಲಪಾಡಿಯಲ್ಲಿ ಉಳ್ಳಾಲ ಪೊಲೀಸರು ಮಂಗಳೂರು ಕಡೆಗೆ ಬರುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಮಂಜೇಶ್ವರ ಪೊಲೀಸರು ತಲಪಾಡಿಯಲ್ಲಿ ಮಂಗಳೂರಿನಿಂದ ಕೇರಳ ಕಡೆ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ತಲಪಾಡಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಉಳ್ಳಾಲ, ಕೆಎಸ್‍ಆರ್‌ಪಿ ಮತ್ತು ಸಂಚಾರಿ ಪೊಲೀಸರು ತಪಾಸಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೇರಳ ಗಡಿ ಸೇರಿದಂತೆ ಜಿಲ್ಲೆಯ 19 ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದು, ಸಂಚರಿಸುವ ಎಲ್ಲ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.