LATEST NEWS
ಪೊಲೀಸ್ ಪಹರೆ ಇರುವ ತಲಪಾಡಿ ಗಡಿಯಲ್ಲಿ ಆರು ಅಂಗಡಿಗೆ ನುಗ್ಗಿದ ಕಳ್ಳರು….!!

ಉಳ್ಳಾಲ ಡಿಸೆಂಬರ್ 10 : ತಲಪಾಡಿಯಲ್ಲಿ ಆರು ಅಂಗಡಿಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿದ್ದು ಇಂದು ಬೆಳಿಗ್ಗೆ ಈ ಘಟನೆ ಗೊತ್ತಾಗಿದೆ.
ಅಶ್ರಫ್ , ಕುಲದೀಪ್, ಶ್ರೀಧರ್ ಹಾಗೂ ಮಹಮ್ಮದ್ , ಶಂಕರ್ ಎಂಬುವರಿಗೆ ಸೇರಿದ ಅಂಗಡಿಗಳಿಂದ ಸಾವಿರಾರು ರೂಪಾಯಿ ಬೆಲೆಬಾಳುವ ಸಿಗರೇಟ್ ಹಾಗೂ ಡ್ರಾಯರ್ನಲ್ಲಿದ್ದ ನಗದು ಕದ್ದೊಯ್ದಿದ್ದಾರೆ. ಅಶ್ರಫ್ ಎಂಬವರಿಗೆ ಸೇರಿದ ಝೆರಾಕ್ಸ್ ಅಂಗಡಿಯಿಂದ ನಗದು ಕಳುವಾಗಿದೆ. ರಾತ್ರಿ ವೇಳೆ ಎಲ್ಲಾ ಅಂಗಡಿಗಳ ಬೀಗ ಮುರಿದಿರುವ ಕಳ್ಳರು ಕೈಚಳಕ ತೋರಿಸಿದ್ದಾರೆ.

ಇನ್ನೊಂದು ಕಡೆ ಗಡಿಭಾಗ ತಲಪಾಡಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ನಡೆಸುತ್ತಿದ್ದರೂ ಕಳ್ಳರು ಸರಣಿಯಾಗಿ ಅಂಗಡಿಗಳಿಂದ ಕಳವು ನಡೆಸಿದ್ದಾರೆ. ಅಲ್ಲದೆ ತಲಪಾಡಿ ಗಡಿಯಲ್ಲಿ 50 ರಷ್ಟು ಪೊಲೀಸರು ಬಂದೋಬಸ್ತ್ ಕರ್ತವ್ಯದಲ್ಲಿದ್ದಾರೆ. ಆದರೂ ಕಳ್ಳರು ಕೃತ್ಯ ಎಸಗಿರುವುದು ಅಚ್ಚರಿಗೆ ಕಾರಣವಾಗಿದೆ. ವಾಹನ ತಪಾಸಣೆ ಕೇಂದ್ರ ಕೂಡ ತಲಪಾಡಿಯಲ್ಲಿ ಇದ್ದರೂ, ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವಾಹನಗಳನ್ನು ಪರಿಶೀಲಿಸಿಲ್ಲವೇ ಅನ್ನುವ ಕುರಿತು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.