LATEST NEWS
ಅಂಗವಿಕಲನ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿಕೊಟ್ಟ ತಹಶಿಲ್ದಾರ್ ಡಾ.ಪ್ರತಿಭಾ ಆರ್
ಉಡುಪಿ ನವೆಂಬರ್ 16: ಕಳೆದ 6 ವರ್ಷಗಳಿಂದ ಆಧಾರ ಮಾಡಿಸಲು ಕಷ್ಟಪಡುತ್ತಿದ್ದ ಅಂಗವಿಕಲ ಬಾಲಕನೊಬ್ಬನಿಗೆ ಸ್ವತಃ ತಹಶಿಲ್ದಾರ್ ಮನೆಗೆ ತೆರಳಿ ಆಧಾರ ಮಾಡಿಸಿಕೊಟ್ಟು ಮಾನವೀಯತೆ ಮರೆದಿದ್ದಾರೆ.
ಪಲಿಮಾರು ಗ್ರಾಮದ ಅಡ್ಡೆ ಬಳಿಯ ಗುರುಸ್ವಾಮಿ, ಮಮತಾ ದಂಪತಿಯ 14 ವರ್ಷ ವಯಸ್ಸಿನ ಮಗ ಆರೋಗ್ಯ ಕೀರ್ತನ್ ಅಂಗವೈಕಲ್ಯತೆಗೆ ಬಲಿಯಾಗಿದ್ದು, ಹಾಸಿಗೆಯಲ್ಲೇ ಮಲಗಿದ್ದಾನೆ. ತಾಯಿಯೇ ಎಲ್ಲ ಸೇವೆ ಮಾಡಬೇಕಾದ ಪರಿಸ್ಥಿತಿ. ಗುರುಸ್ವಾಮಿ ಅವರು ಪೆಟ್ರೋಲ್ ಬಂಕೊಂದರಲ್ಲಿ ರಾತ್ರಿ ಪಾಳಿಯಲ್ಲಿ ವಾಚ್‌ಮನ್ ಕೆಲಸ ಮಾಡುತ್ತಿದ್ದಾರೆ. ಎಲ್‌ಎಲ್‌ಬಿ ಶಿಕ್ಷಣ ಪಡೆದಿರುವ ಮಮತಾ ಗೃಹಿಣಿಯಾಗಿ ಮಗನಿಗಾಗಿ ಬದುಕು ಮೀಸಲಿಟ್ಟಿದ್ದಾರೆ. ದಂಪತಿಗಳಿಗೆ ಕ್ರಿಷ್ಮಾ ಎಂಬ 9 ವರ್ಷದ ಮಗಳಿದ್ದಾಳೆ. 6 ವರ್ಷಗಳಿಂದ ಆರೋಗ್ಯ ಕೀರ್ತನ್‌ಗೆ ಆಧಾರ್ ಮಾಡಿಸಲು ಪ್ರಯತ್ನಿಸಿದ್ದರು. ಆದರೆ ಅಂಗವಿಕಲ ಪ್ರಮಾಣಪತ್ರ ಮಾಡಿಸಲು ಹೋದಾಗ ಆಧಾರ್‌ಕಾರ್ಡ್ ತರಲು ಹೇಳಿದ್ದರು. ಎಷ್ಟೇ ಪ್ರಯತ್ನಿಸಿದರೂ ಮಾಡಿಸಲು ಆಗಿರಲಿಲ್ಲ. ಆಧಾರ್ ಕೇಂದ್ರಕ್ಕೆ ಮಗನನ್ನು ಕರೆದೊಯ್ಯಲು ಸಾಧ್ಯವಾಗದೆ ಆದಾರ್ ಕಾರ್ಡ್ ಮಾಡಿಸಲಾಗಿರಲಿಲ್ಲ.
ಗ್ರಾಮ ಒನ್ ಸೆಂಟರ್ ನಡೆಸುತ್ತಿರುವ ಇಸ್ಮಾಯಿಲ್ ಪಲಿಮಾರು ಅವರು ಈ ಕುಟುಂಬದ ಕಷ್ಟ ಕಂಡು ತಹಶೀಲ್ದಾರ್ ಗಮನಕ್ಕೆ ತಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಪ್ರತಿಭಾ ಅವರು ಆತನ ಮನೆಗೆ ತೆರಳಿ ಕಾರ್ಡ್ ಮಾಡಿಸಿಕೊಟ್ಟಿದ್ದು, ಕುಟುಂಬ ಸಂತೋಷ ಪಡುವಂತಾಗಿದೆ. ‘ಆರು ವರ್ಷಗಳಿಂದ ಈ ಕುಟುಂಬ ಆಧಾರ್‌ಕಾರ್ಡ್ ಮಾಡಿಸಲು ಪ್ರಯತ್ನಿಸುತ್ತಿತ್ತು. ಅಂಗವಿಕಲ ಮಗುವಿಗೆ ನೆರವಾದ ಆತ್ಮ ತೃಪ್ತಿ ಉಂಟಾಗಿದೆ’ ಎನ್ನುತ್ತಾರೆ ಇಸ್ಮಾಯಿಲ್. ‘ಮೇಡಂ ನಮ್ಮ ಮನೆಗೆ ಬಂದಿದ್ದು, ಬಡವರ ಮನೆಗೆ ಭಾಗ್ಯ ಲಕ್ಷ್ಮಿ ಬಂದಂತಾಯಿತು. ಕಾರ್ಡ್‌ನಿಂದ ಮಗನಿಗೆ ಅಂಗವಿಕಲರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಮೇಡಂಗೆ ನಾವು ಸದಾ ಚಿರಋಣಿ’ ಎಂದು ಗುರುಸ್ವಾಮಿ, ಮಮತಾ ಹೇಳಿದರು. ಸೌಲಭ್ಯ ವಂಚಿತರಾಗಬಾರದು: ಕಾಪು ತಾಲ್ಲೂಕಿನಲ್ಲಿ ಈ ರೀತಿ ಹಾಸಿಗೆ ಹಿಡಿದ ಹಿರಿಯರು, ಅಂಗವಿಕಲ ವ್ಯಕ್ತಿಗಳ ಮನೆಗೆ ತೆರಳಿ ಆಧಾರ್ ಕಾರ್ಡ್ ಮಾಡಿಕೊಡಲು ಯೋಜನೆ ಹಾಕಿಕೊಂಡಿದ್ದೇನೆ. ಯಾವ ವ್ಯಕ್ತಿಯೂ ಕಾರ್ಡ್ ಇಲ್ಲದ ಕಾರಣಕ್ಕೆ ಸೌಲಭ್ಯ ವಂಚಿತರಾಗಬಾರದು ಎಂಬುದು ನಮ್ಮ ಧೈಯ. ಈ ಅಂಗವಿಕಲ ಬಾಲಕನಿಗೆ ಸರ್ಕಾರದ ಕಡೆಯಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಲು ಕ್ರಮ ವಹಿಸಲಾಗುವುದು ಎಂದು ತಹಶೀಲ್ದಾರ್ ಪ್ರತಿಭಾ ತಿಳಿಸಿದರು. ಆಧಾರ್‌ಕಾರ್ಡ್ ಆಪರೇಟರ್ ಸಂಧ್ಯಾ, ಪೂರ್ಣಿಮಾ ಕಾರ್ಡ್ ಮಾಡಲು ಸಹಕರಿಸಿದರು.