LATEST NEWS
ಹಣಕ್ಕಾಗಿ ಪೀಡಿಸಿದರೆ ಅದು ಕಿರುಕುಳವಾಗಲ್ಲ’ವಿವಾದಿತ’ ಲೇಡಿ ಜಡ್ಜ್ ಪುಷ್ಪಾರಿಂದ ಆದೇಶ
ನಾಗ್ಪುರ, ಜನವರಿ 31: ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಸಂಬಂಧಿತ ಪ್ರಕರಣಗಳಲ್ಲಿ ವಿವಾದಿತ ತೀರ್ಪು ನೀಡಿ ಚರ್ಚೆಗೆ ಗ್ರಾಸವಾಗಿದ್ದ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಮತ್ತೊಂದು ತೀರ್ಪು ನೀಡಿದ್ದಾರೆ. ಗಂಡನ ಹಣದ ಬೇಡಿಕೆಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಹಿಳೆಯೊಬ್ಬರ ಪತಿಯನ್ನು ಶಿಕ್ಷೆಯಿಂದ ಬಿಡುಗಡೆ ಮಾಡಿರುವ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ಒಂದು ಮಹತ್ವದ ತೀರ್ಪು ನೀಡಿದೆ.
ಹಣಕ್ಕಾಗಿ ಗಂಡ ಬೇಡಿಕೆ ಒಡ್ಡಿದರೆ ಅದು ಕಿರುಕುಳವಾಗಲಾರದು. ಈ ವಿಷಯದಲ್ಲಿ ಹಣದ ಬೇಡಿಕೆ ಎನ್ನುವುದು ಅಸ್ಪಷ್ಟ ಶಬ್ದವಾಗಿರುವ ಕಾರಣ, ಈ ಆಧಾರದ ಮೇಲೆ ಶಿಕ್ಷೆ ನೀಡುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಪುಷ್ಪಾ ಗನೇದಿವಾಲಾ ಹೇಳಿದ್ದಾರೆ. ಇದೇ ಕಾರಣಕ್ಕೆ ಪತ್ನಿಗೆ ಸಾವಿಗೆ ಕಾರಣವಾಗಿದ್ದ ಆರೋಪದ ಮೇಲೆ ಶಿಕ್ಷೆ ಅನುಭವಿಸುತ್ತಿದ್ದ ಪ್ರಶಾಂತ್ ಝಾರೆ ಎನ್ನುವ ವ್ಯಕ್ತಿಯನ್ನು ಈ ನ್ಯಾಯಮೂರ್ತಿಗಳು ಖುಲಾಸೆಗೊಳಿಸಿದ್ದಾರೆ.
ಬಟ್ಟೆಯನ್ನು ಬಿಚ್ಚದೆ, ಚರ್ಮ-ಚರ್ಮಕ್ಕೂ ಸಂಪರ್ಕ ಸಾಧಿಸದೆ ಹಾಗೂ ನೇರವಾಗಿ ದೈಹಿಕ ಸಂಪರ್ಕ ಮಾಡದೆ ಅಂಗಾಗಳನ್ನು ಸ್ಪರ್ಶಿಸಿದರೆ ಅದು ಲೈಂಗಿಕ ಕಿರುಕುಳ ಆಗುವುದಿಲ್ಲ ಮತ್ತು ಅದನ್ನು ಪೊಕ್ಸೊ ಕಾಯ್ದೆ ಅಡಿ ವ್ಯಾಖ್ಯಾನಿಸಲಾಗದು ಎಂದು ವಿವಾದದಲ್ಲಿ ಸಿಲುಕಿರುವ ನ್ಯಾಯಮೂರ್ತಿಯಾಗಿದ್ದಾರೆ ಪುಷ್ಪಾ. ಅಷ್ಟೇ ಅಲ್ಲದೆ, ಇನ್ನೊಂದರಲ್ಲಿ ಅಪ್ರಾಪ್ತ ಬಾಲಕಿಯ ಕೈಹಿಡಿದುಕೊಳ್ಳುವುದು ಮತ್ತು ಪ್ಯಾಂಟ್ ಜಿಪ್ ತೆರೆಯುವುದು ಲೈಂಗಿಕ ಕಿರುಕುಳವಲ್ಲ ಎಂದು ತೀರ್ಪು ನೀಡಿದ್ದರು. ಇವೆರಡೂ ತೀರ್ಪು ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ ಬಾಂಬೆ ಹೈಕೋರ್ಟ್ನಲ್ಲಿ ಪುಷ್ಪಾ ಅವರಿಗೆ ಶಾಶ್ವತ ಸ್ಥಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮಾಡಿದ್ದ ಶಿಫಾರಸನ್ನು ಸುಪ್ರೀಂಕೋರ್ಟ್ ಹಿಂತೆಗೆದುಕೊಂಡಿದೆ.
ಪ್ರಸ್ತುತ ಪ್ರಕರಣದಲ್ಲಿ, 1995ರಲ್ಲಿ ಈ ಜೋಡಿಯ ಮದುವೆಯಾಗಿತ್ತು. 2004ರ ನವೆಂಬರ್ 12ರಂದು ಆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ವರದಕ್ಷಿಣೆ ತರದ ಕಾರಣ ತನ್ನ ಮಗಳು ತನ್ನ ಪತಿ ಮತ್ತು ಅತ್ತೆಯಿಂದ ಕಿರುಕುಳಕ್ಕೆ ಒಳಗಾಗಿದ್ದಾಳೆ ಎಂದು ಮಹಿಳೆಯ ತಂದೆ ದರ್ಭಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಗಳನ್ನು ಪತಿ ತೀವ್ರವಾಗಿ ಹಿಂಸಿಸುತ್ತಿದ್ದ, ಆಕೆಯನ್ನು ಹೊಡೆಯುತ್ತಿದ್ದ ಎಂದೂ ಆರೋಪಿಸಲಾಗಿತ್ತು. ವರದಕ್ಷಿಣೆಗಾಗಿ ಕಿರುಕುಳದ ಆರೋಪದ ಅಡಿ ಸೆಷನ್ಸ್ ಕೋರ್ಟ್ ಐದು ವರ್ಷಗಳ ಶಿಕ್ಷೆಯನ್ನು ವಿಧಿಸಿತ್ತು. ಇದನ್ನು ಆರೋಪಿ, ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದ.
ಪತ್ನಿ ಮನೆಗೆ ಹೋದಾಗಲೆಲ್ಲಾ ಆಕೆಯನ್ನು ಕರೆದುಕೊಂಡು ಬರುತ್ತಿದ್ದ. ಪತ್ನಿ ವಾಪಸ್ ಮನೆಗೆ ಬರಬೇಕು ಎಂದು ಹೇಳುತ್ತಿದ್ದ. ಅಷ್ಟೇ ಅಲ್ಲದೇ ಆಕೆ ಆತ್ಮಹತ್ಯೆ ಮಾಡಿಕೊಂಡಾಗಲೂ ಶವವನ್ನು ತವರಿನವರಿಗೆ ಕೊಡಲಿಲ್ಲ. ಇವೆಲ್ಲಾ ಆತನ ಪ್ರೀತಿಯನ್ನು ತೋರಿಸುತ್ತದೆ. ಆದ್ದರಿಂದ ಕಿರುಕುಳ ನೀಡುತ್ತಿದ್ದ ಎನ್ನುವುದು ಸರಿಯಲ್ಲ ಎಂದಿದ್ದಾರೆ ನ್ಯಾಯಮೂರ್ತಿ ಪುಷ್ಪಾ. ಹೆಂಡತಿಯಿಂದ ಹಣಕ್ಕೆ ಬೇಡಿಕೆ ಇಡುವುದು ‘ಅಸ್ಪಷ್ಟ ಪದವಾಗಿದ್ದು’ ಮತ್ತು ಐಪಿಸಿಯ ಸೆಕ್ಷನ್ 498 ಎ ಪ್ರಕಾರ ಅದನ್ನು ಕಿರುಕುಳ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಆದೇಶಿಸಿ ಶಿಕ್ಷೆಯನ್ನು ರದ್ದು ಮಾಡಿದರು.