KARNATAKA
ಡ್ರೋನ್ ಮೂಲಕ ಆಹಾರ ಡೆಲಿವರಿ ಮಾಡಲಿದೆ ಸ್ವಿಗ್ಗಿ!
ಬೆಂಗಳೂರು, ಫೆಬ್ರವರಿ 16: ಸ್ವಿಗ್ಗಿ ಆ್ಯಪ್‌ನಲ್ಲಿ ಆಹಾರ ಪೂರೈಕೆಗೆ ಆರ್ಡರ್ ಮಾಡಿದರೆ ಅದನ್ನು ಮುಂದಿನ ದಿನಗಳಲ್ಲಿ ಹೊತ್ತು ಡೆಲಿವರಿ ಬಾಯ್ ತರುವುದಿಲ್ಲ, ಬದಲಿಗೆ ಡ್ರೋನ್ ಬರಲಿದೆ!. ಆಹಾರ ಹೊತ್ತು ಬರುವ ಡ್ರೋನ್ ಈಗ ಸಿದ್ಧವಾಗಿದೆ. ಗರುಡ ಏರೋಸ್ಪೇಸ್ ಕಂಪನಿ ಅಭಿವೃದ್ಧಿಪಡಿಸಿರುವ ಡ್ರೋನ್, ಏರೋ ಇಂಡಿಯಾ–2023ರಲ್ಲಿ ಪ್ರದರ್ಶನಗೊಳ್ಳುತ್ತಿದೆ.
‘ಡೆಲಿವರಿ ಡ್ರೋನ್’ ಎಂದೇ ಇದಕ್ಕೆ ಹೆಸರಿಡಲಾಗಿದ್ದು, ಸದ್ಯಕ್ಕೆ 5 ಕೆ.ಜಿ ತೂಕ ಹೊರುವ ಸಾಮರ್ಥ್ಯವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ 10 ರಿಂದ 15 ಕೆ.ಜಿ ಸಾಮರ್ಥದ ಡ್ರೋನ್ ಅಭಿವೃದ್ಧಿಪಡಿಸುವ ಸಿದ್ಧತೆಯಲ್ಲೂ ಗರುಡ ಕಂಪನಿ ಇದೆ.
‘ಸ್ವಿಗ್ಗಿ ಜತೆಗೆ ಈ ಕಂಪನಿ ಮಾತುಕತೆ ನಡೆಸಿದ್ದು, 2 ಕಿಲೋ ಮೀಟರ್ ವ್ಯಾಪ್ತಿಯೊಳಗಿನ ಮನೆಗಳಿಗೆ ಆಹಾರ ಪೂರೈಕೆ ಮಾಡಲಿದೆ. ಮುಂದಿನ ದಿನಗಳಲ್ಲಿ 8 ಕಿಲೋ ಮೀಟರ್ ವ್ಯಾಪ್ತಿಗೂ ವಿಸ್ತರಿಸುವ ಸಾಮರ್ಥ್ಯ ಹೊಂದಲಿದ್ದೇವೆ. 18.8 ಕೆ.ಜಿ ತೂಕದ ಈ ಡ್ರೋನ್, ಸೆಕೆಂಡ್‌ಗೆ 10 ಮೀಟರ್ ವೇಗದಲ್ಲಿ ಸಾಗಲಿದೆ’ ಎಂದು ಕಂಪನಿಯ ಅಧಿಕಾರಿಗಳು ವಿವರಿಸುತ್ತಾರೆ.
200 ಮೀಟರ್ ಎತ್ತರದಲ್ಲಿ ಇದು ಹಾರಾಟ ನಡೆಸಲಿದ್ದು, ಯಾವುದೇ ಅಡೆತಡೆಗಳಲ್ಲದೆ ಸಾಗಲಿದೆ. ಇದಕ್ಕೆ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಎಲ್ಲಾ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ ಎಂದು ಕಂಪನಿಯ ಸಿಇಒ ಅಗ್ನೀಶ್ವರ್ ಜಯಪ್ರಕಾಶ್ ಹೇಳಿದರು. ಆಹಾರ ಪದಾರ್ಥ ಮಾತ್ರವಲ್ಲದೇ ಔಷಧ ಪದಾರ್ಥಗಳ ಸಾಗಣೆಯನ್ನೂ ಮಾಡಬಹುದು. ಜತೆಗೆ ರಕ್ಷಣಾ ಕ್ಷೇತ್ರಕ್ಕೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಕುರಿತೂ ಮಾತುಕತೆ ನಡೆಯುತ್ತಿದೆ ಎಂದರು.