Connect with us

KARNATAKA

ಫೇಸ್‌ಬುಕ್‌ ಗೆಳತಿ ಬಲೆಗೆ ಬಿದ್ದ ಸ್ವಾಮೀಜಿ: ₹ 37 ಲಕ್ಷ ವಂಚನೆ!

ಬೆಂಗಳೂರು, ಜೂನ್ 07: ‘ಫೇಸ್‌ಬುಕ್’ನಲ್ಲಿ ಪರಿಚಯವಾಗಿ ವಿಡಿಯೊ ಕರೆ ಮೂಲಕ ಸಲುಗೆಯಿಂದ ಮಾತನಾಡುತ್ತಿದ್ದ ಯುವತಿಯೊಬ್ಬರ ಬಲೆಗೆ ಬಿದ್ದು ಕಂಬಾಳು ಮಹಾಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಸುಮಾರು ₹37 ಲಕ್ಷ ಕಳೆದುಕೊಂಡಿರುವ ಬಗ್ಗೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರು ಹಣ ವರ್ಗಾವಣೆ ದಾಖಲೆ ಸಮೇತ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ಯುವತಿ ವರ್ಷಾ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ವಾಮೀಜಿ ಅವರನ್ನು 2020ರಲ್ಲಿ ಪರಿಚಯ ಮಾಡಿಕೊಂಡಿದ್ದ ಯುವತಿ, ನಾನಾ ಕಾರಣ ನೀಡಿ ಹಣ ಪಡೆದಿದ್ದಾಳೆ. ಹಣ ವರ್ಗಾವಣೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳು ಸ್ವಾಮೀಜಿ ಬಳಿ ಇವೆ. ಯಾವ ಖಾತೆಗೆ ಹಣ ಜಮೆ ಆಗಿದೆ. ಬೇರೆ ಯಾರೆಲ್ಲ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದರು.

ದೂರಿನ ವಿವರ: ‘ಫೇಸ್‌ಬುಕ್‌’ನಲ್ಲಿ ವರ್ಷಾ ಹೆಸರಿನ ಖಾತೆಯಿಂದ 2020ರಲ್ಲಿ ಫ್ರೆಂಡ್‌ ರಿಕ್ವೆಸ್ಟ್ ಬಂದಿತ್ತು. ಅದನ್ನು ಸ್ವೀಕರಿಸಿದ್ದೆ. ನಂತರ, ಯುವತಿ ಚಾಟಿಂಗ್ ಮಾಡಲಾರಂಭಿಸಿದ್ದಳು. ‘ಆಧ್ಯಾತ್ಮಿಕವಾಗಿ ಆಸಕ್ತಿ ಇದೆ’ ಎಂದು ಹೇಳಿ, ಮೊಬೈಲ್ ನಂಬರ್ ಪಡೆದುಕೊಂಡಿದ್ದಳು. ತನ್ನ ಮೊಬೈಲ್‌ ನಂಬರ್ ಸಹ ಕೊಟ್ಟಿದ್ದಳು’ ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

‘ಮೊಬೈಲ್ ನಂಬರ್ ಪಡೆದ ಬಳಿಕ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಲಾರಂಭಿಸಿದ್ದಳು. ತಾನೊಬ್ಬ ಅನಾಥೆ ಎನ್ನುತ್ತಿದ್ದ ವರ್ಷಾ, ವಿಡಿಯೊ ಕರೆ ಸಹ ಮಾಡಲಾರಂಭಿಸಿದ್ದಳು. ಹಲವು ಬಾರಿ ವಿಡಿಯೊ ಕರೆ ಮಾಡಿದ್ದ ಯುವತಿ, ಎಂದಿಗೂ ಮುಖ ತೋರಿಸಿರಲಿಲ್ಲ. ಕೈ–ಕಾಲುಗಳನ್ನು ಮಾತ್ರ ತೋರಿಸಿ ಮಾತನಾಡುತ್ತಿದ್ದಳು’ ಎಂದೂ ಸ್ವಾಮೀಜಿ ದೂರನಲ್ಲಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಸ್ವಾಮೀಜಿ ವಂಚನೆ ಪ್ರಕರಣದಲ್ಲಿ ಆರೋಪಿ ಕಡೆಯವನು ಎನ್ನಲಾದ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಬಾಲದಂಡಿ, ಬೆಂಗಳೂರು ಗ್ರಾಮಾಂತರ ಎಸ್ಪಿ ಹೇಳಿದ್ದಾರೆ

ಘಟನೆಯ ವಿವರ:

‘ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡುತ್ತಿರುವುದಾಗಿ ಹೇಳಿದ್ದ ಯುವತಿ, ನನ್ನಿಂದ ₹ 2 ಲಕ್ಷ ಪಡೆದಿದ್ದಳು. ತನ್ನ ಹೆಸರಿನಲ್ಲಿ ಹೆಚ್ಚು ಜಮೀನಿದ್ದು, ಅದನ್ನು ಮಠದ ಹೆಸರಿಗೆ ಬರೆಯುವುದಾಗಿ ಹೇಳಿದ್ದ ಯುವತಿ ಹಂತ ಹಂತವಾಗಿ ₹ 35 ಲಕ್ಷ ಪಡೆದಿದ್ದಳು.’

‘ಜಮೀನು ದಾಖಲೆ ತರುವ ವೇಳೆ ತನ್ನ ಮೇಲೆ ಹಲ್ಲೆಯಾಗಿದ್ದು, ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿರುವುದಾಗಿ ಯುವತಿ ಹೇಳಿದ್ದಳು. ಆಸ್ಪತ್ರೆ ಬಿಲ್ ಪಾವತಿಸಲು ಸಹ ಹಣ ಕೇಳಿದ್ದಳು. ಆಕೆ ಮೇಲೆ ಅನುಮಾನ ಬಂದಿತ್ತು. ಪರಿಚಯಸ್ಥರೊಬ್ಬರನ್ನು ಆಸ್ಪತ್ರೆಗೆ ಕಳುಹಿಸಿ ವಿಚಾರಿಸಿದಾಗ, ವರ್ಷಾ ಎಂಬುವವರು ಯಾರೂ ದಾಖಲಾಗಿಲ್ಲವೆಂಬುದು ಗೊತ್ತಾಗಿತ್ತು. ಅವಾಗಲೇ ವರ್ಷಾ ಸ್ನೇಹಿತೆ ಎನ್ನಲಾದ ಮಂಜುಳಾಗೆ ಕರೆ ಮಾಡಿದ್ದೆ. ₹ 55 ಲಕ್ಷ ಸಾಲ ಮಾಡಿ ವರ್ಷಾರನ್ನು ಆಸ್ಪತ್ರೆಯಿಂದ ಕರೆದುಕೊಂಡು ಬಂದಿರುವುದಾಗಿ ಹೇಳಿದ್ದರು. ಆಸ್ಪತ್ರೆಗೆ ನೀಡಿರುವ ಹಣ ನೀಡಬೇಕು. ಇಲ್ಲದಿದ್ದರೆ, ವರ್ಷಾ ಜೊತೆಗಿನ ಸಲುಗೆ ವಿಷಯವನ್ನು ಎಲ್ಲರಿಗೂ ಹೇಳಿ ಮರ್ಯಾದೆ ತೆಗೆಯುವುದಾಗಿ ಬೆದರಿಸಿದ್ದರು’ ಎಂದು ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ಹೇಳಿವೆ.

ಮಠದಲ್ಲಿ ಗಲಾಟೆ: ‘ವರ್ಷಾ ಕಡೆಯವರು ಎನ್ನಲಾದ ಮಂಜುಳಾ ಹಾಗೂ ಇತರರು ಮೇ 23ರಂದು ಮಠಕ್ಕೆ ಹೋಗಿ ಗಲಾಟೆ ಮಾಡಿದ್ದರು. ₹ 55 ಲಕ್ಷ ವಾಪಸು ಕೊಡುವಂತೆ ಸ್ವಾಮೀಜಿಯನ್ನು ಬೆದರಿಸಿದ್ದರು. ಇದಾದ ನಂತರವೇ ಸ್ವಾಮೀಜಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

‘ಮಂಜುಳಾ ಹಾಗೂ ಇತರರಿಗೆ, ವರ್ಷಾ ಜೊತೆಗೆ ಏನು ಸಂಬಂಧ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಸ್ವಾಮೀಜಿ ₹50 ಲಕ್ಷದವರೆಗೂ ಹಣ ಕಳೆದುಕೊಂಡಿರುವ ಅನುಮಾನವೂ ಇದೆ’ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *