FILM
ಮುಂಬೈ – ನಟ ಸೈಫ್ ಆಲಿಖಾನ್ ಗೆ ಚಾಕು ಇರಿದ ಶಂಕಿತನ ಪೋಟೋ ಬಹಿರಂಗ
ಮುಂಬೈ ಜನವರಿ 16: ಬಾಲಿವುಡ್ ನಟ ಸೈಫ್ ಆಲಿಖಾನ್ ಅವರ ಮನೆಗೆ ನುಗ್ಗಿ ಸೈಫ್ ಆಲಿಖಾನ್ ಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಶಂಕಿತನ ಪೋಟೋವನ್ನು ಬಿಡುಗಡೆ ಮಾಡಿದ್ದಾರೆ.
ಸೈಫ್ ಕುಟುಂಬ ವಾಸವಾಗಿರುವ ಅಪಾರ್ಟ್ಮೆಂಟ್ನ ಮೆಟ್ಟಿಲುಗಳನ್ನು ಹತ್ತಿ ಬರುವಾಗ ಸಿಸಿಟಿವಿಯಲ್ಲಿ ಶಂಕಿತನ ವಿಡಿಯೋ ಸೆರೆಯಾಗಿದೆ. ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಸೈಫ್ ಆಲಿಖಾನ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿ ಸೈಫ್ ಅವರ ಮನೆಯ ಕೆಲಸದವರ ಜೊತೆ ವಾಗ್ವಾದ ನಡೆಸಿದ್ದಾನೆ. ಈ ವೇಳೆ ಹೊರಬಂದ ಸೈಫ್ ಮೇಲೆ ಮನಸೋ ಇಚ್ಚೆ ಚೂರಿಯಿಂದ ದಾಳಿ ನಡೆಸಿದ್ದಾನೆ ಎಂದು ಹೇಳಲಾಗಿದೆ. ಶಂಕಿತ ವ್ಯಕ್ತಿಯು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದಾನೆ. ಆತ ಯಾರು? ಆತನ ಉದ್ದೇಶ ಏನಾಗಿತ್ತು ಎಂಬಿತ್ಯಾದಿ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೈಫ್ ಅಲಿ ಖಾನ್ಗೆ 6 ಬಾರಿ ಚಾಕುವಿನಿಂದ ತಿವಿದಿದ್ದಾನೆ. ಬೆನ್ನು, ಕುತ್ತಿಗೆ, ಕೈ ಮುಂತಾದ ಭಾಗಗಳಿಗೆ ಗಾಯಗೊಳಿಸಿದ್ದಾನೆ. ಕೂಡಲೇ ಸೈಫ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಘಟನೆ ಬಗ್ಗೆ ಅನೇಕ ಅನುಮಾನಗಳು ಮೂಡಿವೆ. ಸೈಫ್ ಕುಟುಂಬದವರು ವಾಸವಾಗಿರುವ ಅಪಾರ್ಟ್ಮೆಂಟ್ನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲವೇ? ದರೋಡೆಗೆ ಯತ್ನಿಸಿದ ವ್ಯಕ್ತಿಗಳ ಹಿನ್ನೆಲೆ ಏನು ಎಂಬ ಪ್ರಶ್ನೆ ಎದ್ದಿದೆ. ಸೈಫ್ ಅಲಿ ಖಾನ್ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಬೆನ್ನಿನಲ್ಲಿ ಇದ್ದ ಚಾಕು ಹೊರತೆಗೆಯಲಾಗಿದೆ. ಎಡಗೈ ಮತ್ತು ಕುತ್ತಿಗೆ ಭಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ತಂಡವರು ಚಿಕಿತ್ಸೆ ನೀಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.