FILM
15 ಕೋಟಿ ಹಣಕ್ಕಾಗಿ ನಟ ಸುಶಾಂತ್ ಸಾವು ? ಪ್ರೇಯಸಿ ರಿಯಾ ಕೈವಾಡ ಶಂಕೆ !!
ಮುಂಬೈ, ಜುಲೈ 30: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಹತ್ವದ ತಿರುವು ಕಾಣಿಸಿಕೊಂಡಿದ್ದು, ಆತ್ಮಹತ್ಯೆಯಲ್ಲ ಕೊಲೆ ಅನ್ನುವ ಆರೋಪಗಳಿಗೆ ಪ್ರಬಲ ಸಾಕ್ಷಿ ಲಭ್ಯವಾಗುತ್ತಿದೆ. ಸುಶಾಂತ್ ಪ್ರೇಯಸಿಯಾಗಿದ್ದ ರಿಯಾ ಚಕ್ರವರ್ತಿ ಸುತ್ತ ಅನುಮಾನದ ಹುತ್ತ ಬೆಳೆದುಕೊಂಡಿದೆ.
ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆತನ ತಂದೆ ಕೆ.ಕೆ ಸಿಂಗ್ ಪಾಟ್ನಾದಲ್ಲಿ ಲವರ್ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದರು. ರಿಯಾಳ ಟಾರ್ಚರ್ ಕಾರಣದಿಂದಾಗಿಯೇ ಸುಶಾಂತ್ ಸಾವು ಆಗಿದೆ ಎನ್ನುವುದಕ್ಕೆ ಪೂರಕ ಅಂಶಗಳನ್ನು ಪಟ್ಟಿ ಮಾಡಿ ಕೆ.ಕೆ. ಸಿಂಗ್ ದೂರು ದಾಖಲಿಸಿದ್ದು ರಿಯಾ ವಿರುದ್ಧ ಜುಲೈ 25ರಂದು ಪಾಟ್ನಾ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದರ ಬಳಿಕವೇ ಸುಶಾಂತ್ ಸಾವಿನ ಪ್ರಕರಣ ಮತ್ತೆ ಸದ್ದು ಮಾಡತೊಡಗಿದ್ದು, ಬಿಹಾರ ಪೊಲೀಸರು ಮುಂಬೈಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಪ್ರಮುಖವಾಗಿ ಸುಶಾಂತ್ ಬ್ಯಾಂಕ್ ಅಕೌಂಟ್ ವಿಚಾರದಲ್ಲಿ ಮಾಹಿತಿ ಕಲೆಹಾಕುತ್ತಿದ್ದಾರೆ. ಸುಶಾಂತ್ ಬ್ಯಾಂಕ್ ಖಾತೆಯಲ್ಲಿ 2019ರಲ್ಲಿ 19 ಕೋಟಿ ರೂಪಾಯಿ ಹಣ ಇತ್ತು. ಆದರೆ, ಈ ಮಧ್ಯೆ ಸುಶಾಂತ್ ಖಾತೆಯಿಂದ 15 ಕೋಟಿ ರೂಪಾಯಿ ಹಣ ಸುಶಾಂತ್ ಗೆ ಸಂಬಂಧ ಇಲ್ಲದ ಯಾವುದೋ ಖಾತೆಗೆ ವರ್ಗಾವಣೆಯಾಗಿದೆ. ಈ ಹಣವನ್ನು ರಿಯಾ ಪಡೆದಿದ್ದು, ಅದರ ಹಿನ್ನೆಲೆಯಲ್ಲಿ ಸುಶಾಂತ್ ಗೆ ರಿಯಾ ಬೆದರಿಕೆ ಹಾಕಿದ್ದಳು. ಅಲ್ಲದೆ, ಸುಶಾಂತ್ ಆರೋಗ್ಯದ ಬಗ್ಗೆ ಮೀಡಿಯಾಕ್ಕೆ ಮಾಹಿತಿ ನೀಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಇದರಿಂದ ಮಾನಸಿಕವಾಗಿ ನೊಂದು ಸುಶಾಂತ್ ಆತ್ಮಹತ್ಯೆ ಮಾಡಿದ್ದಾನೆ ಎಂದು ಸುಶಾಂತ್ ತಂದೆ ದೂರಿನಲ್ಲಿ ಆರೋಪಿಸಿದ್ದರು.
ಇದೇ ವೇಳೆ, ಮುಂಬೈ ಪೊಲೀಸರ ತನಿಖೆ ಬಗ್ಗೆ ಸುಶಾಂತ್ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬೈ ಪೊಲೀಸರು ದೊಡ್ಡ ಪ್ರೊಡಕ್ಷನ್ ಹೌಸ್ ಹೆಸರನ್ನು ಎತ್ತುತ್ತಿದ್ದಾರೆ ವಿನಾ ರಿಯಾ ಬಗ್ಗೆ ತನಿಖೆ ನಡೆಸುತ್ತಿಲ್ಲ ಎಂದಿದ್ದಾರೆ. ವಿಶೇಷ ಅಂದರೆ, ರಿಯಾ ಚಕ್ರವರ್ತಿ ಕಿರುಕುಳದ ಬಗ್ಗೆ ಸುಶಾಂತ್ ಕುಟುಂಬಸ್ಥರು ಕಳೆದ ಫೆಬ್ರವರಿ ತಿಂಗಳಲ್ಲೇ ದೂರು ನೀಡಿದ್ದರು. ಈ ನಡುವೆ, ಬಿಹಾರದಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ಅಲ್ಲಿನ ಪೊಲೀಸರು ಮುಂಬೈಗೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ, ರಿಯಾ ಚಕ್ರವರ್ತಿ ಕಡೆಯಿಂದ ಬಿಹಾರ ಪೊಲೀಸರಿಗೆ ತನಿಖೆಗೆ ಅನುಮತಿ ನೀಡಬಾರದೆಂದು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಕೆಯಾಗಿದೆ. ಬಿಹಾರ ಪೊಲೀಸರು ಸುಶಾಂತ್ ಆಪ್ತರನ್ನು ತನಿಖೆಗೆ ಒಳಪಡಿಸುತ್ತಿದ್ದರೆ, ರಿಯಾ ಮಾತ್ರ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾಳೆ.
ಇದೆಲ್ಲದರ ನಡುವೆ, ಕೇಂದ್ರ ಸರಕಾರದ ಜಾರಿ ನಿರ್ದೇಶನಾಲಯವೂ ಪ್ರಕರಣದ ಬಗ್ಗೆ ತನಿಖೆ ಶುರು ಮಾಡಿದೆ. ಪ್ರಕರಣದಲ್ಲಿ 15 ಕೋಟಿ ರೂಪಾಯಿ ಹಣದ ವಹಿವಾಟು ಕಂಡುಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿದೆ. ಮುಂಬೈ ಮತ್ತು ಬಿಹಾರ ಪೊಲೀಸರ ತನಿಖೆಯ ಬೆನ್ನಲ್ಲೇ ಮೂರನೇ ವಿಂಗ್ ತನಿಖೆ ಆರಂಭಿಸಿದ್ದು, ಹಣದ ವಹಿವಾಟಿನ ವಿಚಾರದಲ್ಲೇ ಸುಶಾಂತ್ ಸಾವು ಸಂಭವಿಸಿತ್ತೇ ಎನ್ನುವ ಅನುಮಾನ ಹುಟ್ಟಿದೆ.
ಇದೇ ವೇಳೆ, ಸುಶಾಂತ್ ಸಾವು ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದು ಅದರಷ್ಟಕ್ಕೇ ನಡೆಯಲಿ ಎಂದಿದೆ. ಈ ನಡುವೆ, ಬಿಹಾರ ಪೊಲೀಸರು ಮುಂಬೈಗೆ ಬಂದು ತನಿಖೆ ಆರಂಭಿಸಿರುವ ಬಗ್ಗೆ ಮಹಾರಾಷ್ಟ್ರದ ಗೃಹಸಚಿವ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಹಾರ ಪೊಲೀಸರು ಅಂತಾರಾಜ್ಯ ಪ್ರೋಟೋಕಾಲ್ ಅನುಸರಿಸದೆ ಮುಂಬೈನಲ್ಲಿ ತನಿಖೆ ನಡೆಸುತ್ತಿದ್ದಾರೆ. ನಮ್ಮ ಪೊಲೀಸರು ತನಿಖೆ ನಡೆಸುತ್ತಿರುವಾಗ ಬಿಹಾರ ಪೊಲೀಸರು ಇಲ್ಲಿ ಬಂದು ತನಿಖೆ ನಡೆಸುವ ಅಗತ್ಯವೇನಿದೆ ಎಂದು ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ, ಸುಶಾಂತ್ ನದ್ದು ಸಹಜ ಸಾವಲ್ಲ, ಅದೊಂದು ವ್ಯವಸ್ಥಿತ ರೀತಿಯ ಕೊಲೆ ಎಂದು ಹೇಳಿಕೆ ನೀಡಿದ್ದಾರೆ.
ಇವೆಲ್ಲ ಬೆಳವಣಿಗೆ ನೋಡಿದರೆ ಸುಶಾಂತ್ ಸಾವಿನಲ್ಲಿ ಪ್ರಬಲ ಕೈವಾಡ ಇರುವ ಶಂಕೆ ವ್ಯಕ್ತವಾಗುತ್ತಿದೆ. ಅಲ್ಲದೆ, ಪ್ರಕರಣ ಮುಚ್ಚಿ ಹಾಕಲು ಕಾಣದ ಕೈಗಳು ಪ್ರಯತ್ನ ಮಾಡುತ್ತಿರುವ ಸಂಶಯವೂ ವ್ಯಕ್ತವಾಗಿದೆ. ಮಹಾರಾಷ್ಟ್ರ ಸರಕಾರ ಒಂದೆಡೆ ವಾಲುತ್ತಿದ್ದರೆ, ಬಿಹಾರ ಸರಕಾರ ಮತ್ತೊಂದು ಕಡೆ ವಾಲಿದ್ದರಿಂದಾಗಿ ಸಾವಿನ ಪ್ರಕರಣದಲ್ಲಿ ನಿಧಾನವಾಗಿ ಹೊಗೆ ಏಳತೊಡಗಿದ್ದಂತೂ ಸತ್ಯ.