LATEST NEWS
ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟಗಾರರ ಮೇಲೆ ಬಿತ್ತು ಎಫ್ಐಆರ್….!!
ಮಂಗಳೂರು ಅಕ್ಟೋಬರ್ 21 : ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ವಿವಾದ ಸದ್ಯ ಮುಗಿಯುವ ಸಾಧ್ಯತೆ ಇಲ್ಲ. ಸಮಾನ ಮನಸ್ಕ ಸಂಘಟನೆಗಳು ಸೇರಿ ಟೋಲ್ ಗೇಟ್ ಮುಚ್ಚಲು ಪ್ರತಿಭಟನೆ ನಡೆಸಿದರೂ ಮತ್ತೆ ಟೋಲ್ ಗೇಟ್ ಕಾರ್ಯಾಚರಿಸುತ್ತಿದ್ದು, ಇದೀಗ ಟೋಲ್‍ಗೇಟ್ ಕಿತ್ತೆಸೆಯಲು ಯತ್ನಿಸಿದ ಹಿನ್ನೆಲೆಯಲ್ಲಿ ಹೋರಾಟಗಾರರ ಮೇಲೆ ಎಫ್‍ಐಆರ್ ದಾಖಲಾಗಿದೆ. ಮತ್ತೊಂದು ಸುತ್ತಿನ ಹೋರಾಟಕ್ಕೆ ಇದು ಕಾರಣವಾಗಿದೆ.
ಅಕ್ಟೋಬರ್ 18 ರಂದು ಮಂಗಳೂರಿನ ಸುರತ್ಕಲ್ ಟೋಲ್‍ಗೇಟ್ ಬಳಿ ಭಾರೀ ಹೈಡ್ರಾಮಾವೇ ನಡೆದಿತ್ತು. ಸುರತ್ಕಲ್ ಟೋಲ್‍ಗೇಟ್ ಅಕ್ರಮ ಎಂದು ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಹೋರಾಟ ಉಗ್ರ ಸ್ವರೂಪ ಪಡೆದಿತ್ತು. ಪೊಲೀಸರು ಹಾಕಿದ್ದ ತಡೆಬೇಲಿ ಮುರಿದು ಟೋಲ್‍ಗೇಟ್‍ನತ್ತ ನುಗ್ಗಿದ್ದ ಹೋರಾಟಗಾರರು, ಹೈಡ್ರಾಮಾ ನಡೆಸಿದ್ದು ಬಳಿಕ ಪೊಲೀಸರು ನೂರಾರು ಹೋರಾಟಗಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದ್ರು. ಆದರೆ ಇದೀಗ ಟೋಲ್‍ಗೇಟ್‍ನ ಗುತ್ತಿಗೆದಾರ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ನೀಡಿದ ದೂರಿನಂತೆ ಹೋರಾಟಗಾರರ ಮೇಲೆ ಎರಡು ಎಫ್‍ಐಆರ್ ದಾಖಲಾಗಿದೆ.
ಟೋಲ್‍ಗೇಟನ್ನು ನವೆಂಬರ್ 7ರೊಳಗಾಗಿ ಸ್ಥಗಿತಗೊಳಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ. ಆದರೆ ಇಂತಹ ದಿನಾಂಕಗಳು ಕಳೆದ ಆರು ವರ್ಷದಿಂದ ಆಗಿರೋದ್ರಿಂದ ಇದರ ಬಗ್ಗೆ ನಂಬಿಕೆ ಇಲ್ಲ. ಹೀಗಾಗಿ ಹೋರಾಟ ಸಮಿತಿ ಸಭೆ ಸೇರಿ ಮುಂದಿನ ಹೋರಾಟದ ಭಾಗವಾಗಿ ಅಕ್ಟೋಬರ್ 28 ರಿಂದ ಟೋಲ್‍ಗೇಟ್ ಮುಂಭಾಗದಲ್ಲಿ ರಾತ್ರಿ ಹಗಲು ಅನಿರ್ದಿಷ್ಟ ಧರಣಿ ನಡೆಸಲು ನಿರ್ಧರಿಸಲಾಗಿದೆ. ಟೋಲ್ ಗೇಟ್ ವಿಚಾರದಲ್ಲಿ ಈ ಬಾರಿ ಮಾಡು ಇಲ್ಲವೇ ಮಡಿ ಅನ್ನೋದಕ್ಕೆ ಹೋರಾಟಗಾರರ ಸಮಿತಿ ನಿರ್ಧರಿಸಿದೆ.