LATEST NEWS
ಅಪ್ರಾಪ್ತೆಯ ಆತ್ಮಹತ್ಯೆಗೆ ಕಾರಣನಾದ ಪೊಲೀಸ್ ಕಾನ್ಸ್ಟೇಬಲ್ ಗೆ ಜೀವಾವಧಿ ಶಿಕ್ಷೆ
ಮಂಗಳೂರು : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪಿ ಪೊಲೀಸ್ ಕಾನ್‌ಸ್ಟೇಬಲ್‌ಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೊಕ್ಸೊ) ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ದ.ಕ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಬಜ್ಪೆ ಸಿದ್ಧಾರ್ಥನಗರ ನಿವಾಸಿ ಪ್ರವೀಣ್ ಸಾಲ್ಯಾನ್ (35) ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ (ಪೋಕ್ಸೋ) ಮಂಜುಳಾ ಇಟ್ಟಿ ಸಮಗ್ರ ವಿಚಾರಣೆ ನಡೆಸಿ ಆರೋಪಿಗೆ ಐಪಿಸಿ 305ರಡಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಹಾಗೂ ಸೆಕ್ಷನ್ 12ರಡಿ (ಪೊಕ್ಸೊ) 3 ವರ್ಷ ಕಠಿಣ ಸಜೆ ಹಾಗೂ 1 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
2015ರ ಫೆ.16ರಂದು ಫೇಸ್ ಬುಕ್ ಮೂಲಕ ಪರಿಚಯಿಸಿಕೊಂಡ ಪ್ರವೀಣ್ ಅಪ್ರಾಪ್ತೆಯನ್ನು ಪ್ರೀತಿಸುವುದಾಗಿ ಹೇಳಿಕೊಂಡು ಬಳಿಕ ನಿರಂತರವಾಗಿ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸುತ್ತಲೇ ಅಶ್ಲೀಲ ಸಂಭಾಷಣೆ ನಡೆಸುತ್ತಿದ್ದ ಎನ್ನಲಾಗಿದೆ. ಬಾಲಕಿಯ ಮುಗ್ಧತೆಯನ್ನು ದಾಳವಾಗಿಸಿಕೊಂಡ ಆರೋಪಿಯು ಬಾಲಕಿ ಬಳಿ 1 ಲಕ್ಷ ರೂ. ಹಣ ಅಥವಾ ಚಿನ್ನ ನೀಡಬೇಕೆಂದು ಬೇಡಿಕೆಯಿರಿಸಿದ್ದ ಎಂದು ಆರೋಪಿಸಲಾಗಿತ್ತು.
ಇದರಿಂದ ನೊಂದ ಬಾಲಕಿಯು ತನ್ನ ಮನೆಯ ಬೆಡ್‌ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಆರೋಪಿಯನ್ನು ಪೊಲೀಸ್ ಇಲಾಖೆಯಿಂದ ಅಮಾನತು ಮಾಡಲಾಗಿತ್ತು.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದರು.
You must be logged in to post a comment Login