LATEST NEWS
ಸುರತ್ಕಲ್ – ಎರಡು ಸೆಕೆಂಡ್ ಹ್ಯಾಂಡ್ ಕಾರುಗಳನ್ನೇ ಕದ್ದ ಕಳ್ಳರು…!!

ಮಂಗಳೂರು ಜುಲೈ 13 : ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಮಾಡುವ ಮಳಿಗೆಗೆ ಕಳ್ಳರು ನುಗ್ಗಿ ಎರಡು ಕಾರುಗಳ ಜೊತೆ ಬೆಲೆ ಬಾಳುವ ವಸ್ತುಗಳನ್ನು ಕೊಂಡೊಯ್ದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ನ ಹೊಸಬೆಟ್ಟು ಜಂಕ್ಷನ್‌ನಲ್ಲಿ ನಡೆದಿದೆ.
ಅಬಿದ್ ಅಹಮ್ಮದ್ ಸುರಲ್ಪಾಡಿ ಎಂಬವರಿಗೆ ಸೇರಿದ್ದ ಈ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗೆ ಮಧ್ಯರಾತ್ರಿ ಹೆಲ್ಮೆಟ್ ಧರಿಸಿದ್ದ ಇಬ್ಬರು ಖದೀಮರು ನುಗ್ಗಿದ್ದಾರೆ. ಶೋರೂಂ ಬಾಗಿಲನ್ನು ಒಡೆದು ಹಾಕಿ ಒಳ ಪ್ರವೇಶಿಸಿ ಕಚೇರಿ ಪೂರ್ತಿ ತಡಕಾಡಿ ಡ್ರಾವರ್ ನಲ್ಲಿದ್ದ ಕಾರುಗಳ ಕೀಯನ್ನು ಪಡೆದು,ಕಚೇರಿ ಮುಂಭಾಗ ಮಾರಾಟಕ್ಕೆ ನಿಲ್ಲಿಸಿದ್ದ ಒಂದು ಸ್ವಿಫ್ಟ್ ಮತ್ತು ಮತ್ತೊಂದು ಕ್ರೆಟಾ ಸೇರಿ ಎರಡು ಬೆಲೆ ಬಾಳುವ ಕಾರುಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.

ಎರಡು ಕಾರುಗಳ ಬೆಲೆ ಸುಮಾರು 15 ಲಕ್ಷ ಎಂದು ಅಂದಾಜಿಸಲಾಗಿದೆ. ಜೊತೆಗೆ ಕಚೇರಿಯ ಒಳಗಿದ್ದ ಲ್ಯಾಪ್ ಟಾಪ್, ಪ್ರಿಂಟರ್, ಮೊಬೈಲ್, ಕಾರುಗಳ ದಾಖಲಾತಿ ಪತ್ರಗಳನ್ನು ಕಳ್ಳರು ಜೊತೆಗೊಯ್ದಿದ್ದಾರೆ.
ಖದೀಮರ ಗ್ಲಾಸ್ ಒಡೆಯುವ ದೃಶ್ಯ, ಕಾರು ಎಸ್ಕೇಪ್ ಮಾಡಿದ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ತೆರಳಿನ ಪರಿಶೀಲನೆ ನಡೆಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.