LATEST NEWS
ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಅಂತ್ಯಕ್ರಿಯೆ ವಿಡಿಯೋ ವೈರಲ್ – ಮರುಗಿದ ನಟ ಜಗ್ಗೇಶ್!
ಬೆಂಗಳೂರು ಸೆಪ್ಟೆಂಬರ್ 27: ಕರೊನಾದಿಂದಾಗಿ ಮೃತಪಟ್ಟ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ಅಂತ್ಯಕ್ರಿಯೆ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಕೇಂದ್ರ ಸಚಿವರೊಬ್ಬರ ಅಂತ್ಯಕ್ರಿಯೆಯನ್ನು ಈ ರೀತಿಯಾಗಿ ಮಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾ ಸೊಂಕು ಹರಡುವ ಪ್ರಾರಂಭಿಕ ತಿಂಗಳಲ್ಲಿ ಕೊರೊನಾ ದಿಂದ ಮೃತಪಟ್ಟವರನ್ನು ಜೆಸಿಬಿಯಲ್ಲಿ ಮಣ್ಣು ಮಾಡಿದ್ದರು. ಕೊರೊನಾದಿಂದ ಸತ್ತವರನ್ನು ಕೆಲ ತಿಂಗಳುಗಳ ಹಿಂದೆ ಒಂದೇ ಗುಂಡಿಯಲ್ಲಿ ಕಸದಂತೆ ಹಾಕಿ ಮುಚ್ಚಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ನಂತರ ಸ್ವತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಈ ಘಟನೆಯನ್ನು ಖಂಡಿಸಿದ್ದರು. ಆದರೆ ಈಗ ಅದೇ ಪರಿಸ್ಥಿತಿ ಕೇಂದ್ರ ಸಚಿವರೊಬ್ಬರಿಗೆ ಬಂದಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಸಂಸದರ ಪಾರ್ಥಿವ ಶರೀರವನ್ನು ಕಸದಂತೆ ಗುಂಡಿಗೆ ಎಸೆದು ಮಣ್ಣು ಮುಚ್ಚಲಾಗಿದೆ ಸಚಿವರಿಗೆ ಈ ರೀತಿಯಾದರೇ ಜನಸಾಮಾನ್ಯರ ಕಥೆಯೇನು? ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ನಟ ಜಗ್ಗೇಶ್ ಕೊರೊನಾ ವೈರಸ್ ಆರ್ಭಟ, ಅದರಿಂದ ಸಾಮಾನ್ಯ ಜನರ ನೋವು, ಧನನಷ್ಟ ನೆಮ್ಮದಿಹಾಳು, ಮಾನಸಿಕ ಒತ್ತಡ ಇವನ್ನು ತಕ್ಕಮಟ್ಟಿಗೆ ತಡೆಯಬಹುದು. ಆದರೆ ಸತ್ತಾಗ ಬಂಧುಮಿತ್ರನು ನೋಡಲಾಗದೆ ಮುಖಮುಚ್ಚಿದ ಅನಾಮಿಕರು ಸತ್ತವರನ್ನು ಕಸದಂತೆ ಗುಂಡಿಯಲ್ಲಿ ಹೀಗೆ ಬಿಸಾಕುವ ಸ್ಥಿತಿ ಬಂದಮೇಲೆ ಯಾವ ಪುರುಷಾರ್ಥಕ್ಕೆ ಹಣ, ಅಧಿಕಾರ ನಾನು ನನ್ನದು ಮಮಕಾರ? ನಗುವಿನ ಬಾಳ್ವೆಯೇ ನಿಜ ಶ್ರೀಮಂತಿಕೆ’ ಎಂದು ಟ್ವೀಟ್ ಮಾಡಿದ್ದಾರೆ.
ಮಂಗಳೂರಿನಲ್ಲೂ ಮೊದಲು ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ ಘಟನೆಗಳು ನಡೆದಿತ್ತು. ನಂತರ ಪಿಎಫ್ಐ, ಎಸ್ ಡಿಪಿಐ ಸೇರಿದಂತೆ ಇತರ ಸಂಘಟನೆಗಳು ಸತ್ತವರ ಧರ್ಮ ನೋಡದೆ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸಿ ದೇಶಕ್ಕೆ ಮಾದರಿಯಾಗಿದ್ದರು. ಈಗ ಕರ್ನಾಟಕದಲ್ಲಿ ಬಹುತೇಕ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ನಡೆಸಲಾಗುತ್ತಿದೆ. ಆದರೆ ದೆಹಲಿಯ ಪರಿಸ್ಥಿತಿ ಮಾತ್ರ ವಿಭಿನ್ನವಾಗಿದೆ ಎನ್ನುವುದು ಈ ವಿಡಿಯೋದಲ್ಲಿ ತಿಳಿಯುತ್ತದೆ.