LATEST NEWS
ಸಾಮಾಜಿಕ ಜಾಲತಾಣದಲ್ಲಿ ಸಹಾಯ ಯಾಚಿಸುವವರ ವಿರುದ್ದ ಕ್ರಮಕೈಗೊಂಡರೆ..ನ್ಯಾಯಾಂಗ ನಿಂದನೆ..ಸುಪ್ರೀಂಕೋರ್ಟ್ ಖಡಕ್ ವಾರ್ನಿಂಗ್
ನವದೆಹಲಿ ಎಪ್ರಿಲ್ 30: ಕೊರೊನಾ ಸಂದರ್ಭ ಸಾಮಾಜಿಕ ಜಾಲತಾಣಗಳ ಮೂಲಕ ನೆರವು ಯಾಚಿಸುವವರ ವಿರುದ್ದ ಸರಕಾರಗಳು ಕ್ರಮಕ್ಕೆ ಮುಂದಾದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.
ಕೋವಿಡ್-19ಗೆ ಸಂಬಂಧಪಟ್ಟ ಮಾಹಿತಿಗಳನ್ನು ಜನರಿಗೆ ತಲುಪದಂತೆ ತಡೆಯುವುದು, ತಿರಸ್ಕರಿಸುವುದು, ಸೋಷಿಯಲ್ ಮೀಡಿಯಾಗಳಲ್ಲಿ ಮಾಹಿತಿಗಳನ್ನು ಮತ್ತು ವಾಸ್ತವ ಪರಿಸ್ಥಿತಿಗಳನ್ನು ಹತ್ತಿಕ್ಕಲು ನೋಡಿದರೆ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಡಿಜಿಪಿಗಳಿಗೆ ಆದೇಶ ಹೊರಡಿಸಬೇಕೆಂದು ಸಹ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ಆದೇಶ ನೀಡಿದೆ.
ನಾಗರಿಕರು ತಮ್ಮ ಕುಂದುಕೊರತೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದರೆ ಯಾವುದೇ ರಾಜ್ಯವು ಮಾಹಿತಿಯನ್ನು ಹತ್ತಿಕ್ಕುವ ಅಥವಾ ಮಾಹಿತಿಯನ್ನು ಮರೆಮಾಚುವ ಕೆಲಸ ಮಾಡಬೇಡಿ. ಈ ವಿಷಯದಲ್ಲಿ ಯಾವುದೇ ನಾಗರಿಕರಿಗೆ ಕಿರುಕುಳ ನೀಡಿದರೆ ಇದನ್ನು ನ್ಯಾಯಾಂಗ ನಿಂದನೆಯೆಂದು ಪರಿಗಣಿಸಬೇಕಾಗುತ್ತದೆ ಎಂದು ಸಹ ಸುಪ್ರೀಂ ಕೋರ್ಟ್ ಸರ್ಕಾರಗಳಿಗೆ ಒತ್ತಿ ಹೇಳಿದೆ.
ಜಾಲತಾಣಗಳ ಮೂಲಕ ಜನರು ಸುಳ್ಳು ದೂರುಗಳನ್ನು ದಾಖಲಿಸುತ್ತಾರೆ, ಅಗತ್ಯವಿಲ್ಲದಿದ್ದರೂ ನೆರವು ಯಾಚಿಸುತ್ತಾರೆ ಎಂದು ಭಾವಿಸಿ, ನೆರವು ನಿರಾಕರಿಸಬಾರದು ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿತು. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಹಾಗೂ ಎಸ್.ರವೀಂದ್ರ ಭಟ್ ಅವರೂ ಈ ಪೀಠದಲ್ಲಿದ್ದಾರೆ. ‘ಯಾವುದೇ ರೀತಿಯ ಅಡೆತಡೆ ಇಲ್ಲದೆಯೇ ಮಾಹಿತಿಯ ಪ್ರಸಾರಕ್ಕೆ ಅವಕಾಶ ಇರಬೇಕು. ಜನರ ಅಹವಾಲುಗಳನ್ನು ನಾವು ಕೇಳಬೇಕು’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ‘ಆಮ್ಲಜನಕ, ಹಾಸಿಗೆ ಕೊರತೆ ಬಗ್ಗೆ, ವೈದ್ಯರು ಸಿಗದಿರುವ ಬಗ್ಗೆ ಜನರು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಾಗ, ವದಂತಿ ಹಬ್ಬಿಸುತ್ತಿದ್ದಾರೆ ಎಂದು ಪರಿಗಣಿಸಿ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು’ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತು.
ಕೋವಿಡ್‌ನಿಂದಾಗಿ ಸಂಕಷ್ಟದಲ್ಲಿರುವ ಜನರು ಇಂಥ ಪೋಸ್ಟ್‌ಗಳನ್ನು ಮಾಡಿದಾಗ ಅವರ ವಿರುದ್ಧ ಕ್ರಮ ತೆಗೆದುಕೊಂಡರೆ ಅದನ್ನು ನ್ಯಾಯಾಂಗ ನಿಂದನೆ ಎಂದೇ ಪರಿಗಣಿಸಲಾಗುವುದು’ ಎಂದೂ ಎಚ್ಚರಿಸಿತು. ‘ಸೋಂಕಿತ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೂ ಹಾಸಿಗೆ ಸಿಗುತ್ತಿಲ್ಲ’ ಎಂಬ ಬಗ್ಗೆ ನ್ಯಾಯಪೀಠವು, ‘ಪರಿಸ್ಥಿತಿ ಗಂಭೀರವಾಗಿದೆ. ಕಳೆದ 70 ವರ್ಷಗಳ ಅವಧಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒದಗಿಸಿರುವ ಮೂಲಸೌಕರ್ಯ ಯಾವುದಕ್ಕೂ ಸಾಕಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು.