LATEST NEWS
ಯೋಗ ಗುರು ಬಾಬಾ ರಾಮದೇವ್ ಗೆ ಮತ್ತೆ ಉಗಿದ ಸುಪ್ರೀಂಕೋರ್ಟ್
ನವದೆಹಲಿ ಎಪ್ರಿಲ್ 16: ಸುಳ್ಳು ಜಾಹಿರಾತು ಸಂಬಂಧ ಸುಪ್ರೀಂಕೋರ್ಟ್ ನಿಂದ ವಿಚಾರಣೆ ಎದುರಿಸುತ್ತಿರುವ ಬಾಬಾರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಮತ್ತೆ ತಪರಾಕಿ ಹಾಕಿದೆ. ಪ್ರತೀ ಬಾರಿ ಸುಪ್ರೀಂಕೋರ್ಟ್ ಬಂದಾಗಲೂ ಈ ಇಬ್ಬರ ಮೇಲೆ ನ್ಯಾಯಾಧೀಶರು ಗರಂ ಆಗುತ್ತಿದ್ದು, ಇದೀಗ ಮತ್ತೆ ಉಗಿಸಿಕೊಂಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಘವು 2022ರಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಪತಂಜಲಿ ಆಯುರ್ವೇದ್ ಕಂಪನಿಯು ಅಲೋಪಥಿ ವಿಚಾರದಲ್ಲಿ ತಪ್ಪುದಾರಿಗೆ ಎಳೆಯುವ ಜಾಹೀರಾತು ನೀಡಿದೆ ಎಂದು ಅರ್ಜಿದಾರರು ದೂರಿದ್ದಾರೆ. ರಾಮದೇವ ಮತ್ತು ಬಾಲಕೃಷ್ಣ ಅವರ ವಕೀಲ ಮುಕುಲ್ ರೋಹಟಗಿ, ‘ಪಶ್ಚಾತ್ತಾಪ ವ್ಯಕ್ತಪಡಿಸಲು ಸಾರ್ವಜನಿಕವಾಗಿ ಕ್ಷಮೆಯಾಚಿಸಲು’ ಇಬ್ಬರೂ ಸಿದ್ಧರಿದ್ದಾರೆ ಎಂಬುದನ್ನು ಪೀಠಕ್ಕೆ ತಿಳಿಸಿದರು. ಪೀಠವು ಮುಂದಿನ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ನಿಗದಿ ಮಾಡಿದೆ.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳು, ರಾಮದೇವ ಮತ್ತು ಬಾಲಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದರು. ಕೋರ್ಟ್‌ಗೆ ಕೊಟ್ಟಿದ್ದ ಮಾತು ಹಾಗೂ ಕೋರ್ಟ್‌ನ ಆದೇಶವನ್ನು ಮೀರಿ ನಡೆದುಕೊಂಡಿದ್ದು ಏಕೆ ಎಂದು ಪ್ರಶ್ನಿಸಿದರು.
‘ನಾನು ಮಾಡಿದ ತಪ್ಪಿಗೆ ಬೇಷರತ್ ಕ್ಷಮೆ ಯಾಚಿಸಿದ್ದೇನೆ’ ಎಂದು ರಾಮದೇವ ಅವರು ಕೈಮುಗಿದು ಹೇಳಿದರು. ಅಲ್ಲದೆ, ಕೋರ್ಟ್‌ಗೆ ಅಗೌರವ ತೋರಿಸುವ ಯಾವ ಉದ್ದೇಶವೂ ತಮಗೆ ಇರಲಿಲ್ಲ ಎಂದು ತಿಳಿಸಿದರು. ‘ನಾನು ಹಿಂದೆ ಮಾಡಿದ್ದನ್ನು ಮಾಡಬಾರದಾಗಿತ್ತು. ಇನ್ನು ಮುಂದೆ ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುಕೊಳ್ಳುವೆ. ಕೆಲಸದ ಹುರುಪಿನಲ್ಲಿ ಆ ರೀತಿ ಆಗಿಹೋಯಿತು’ ಎಂದರು. ಬಾಲಕೃಷ್ಣ ಅವರೂ ಕ್ಷಮೆ ಯಾಚಿಸಿದರು. ಈ ಹಂತದಲ್ಲಿ ಇಬ್ಬರು ಕ್ಷಮೆಯಾಚಿದರೂ, ಅದನ್ನು ಹಿಮಾ ಕೊಹ್ಲಿ, ಅಮಾನುಲ್ಲಾ ಅವರಿದ್ದ ನ್ಯಾಯಪೀಠ ಸಂಪೂರ್ಣವಾಗಿ ಒಪ್ಪಲಿಲ್ಲ.
ನಿಮ್ಮನ್ನು ಕ್ಷಮಿಸಿದ್ದೇವೆ ಎಂದು ನಾವು ಹೇಳುವುದಿಲ್ಲ. ನೀವೇನು ಅಮಾಯಕರಲ್ಲ. ನಿಮ್ಮ ಹಿಂದಿನ ಇತಿಹಾಸದ ಬಗ್ಗೆ ನಾವು ಕುರುಡರಾಗಿರಲು ಸಾಧ್ಯವಿಲ್ಲ. ನಿಮ್ಮ ಕ್ಷಮೆಯಾಚನೆ ಬಗ್ಗೆ ಆಲೋಚಿಸ್ತೇವೆ. ನಿಮ್ಮನ್ನು ಕುಣಿಕೆಯಿಂದ ಬಿಡಿಸಲಾಗಿದೆ ಎಂದು ನಾವು ಹೇಳುತ್ತಿಲ್ಲ. ಮುದ್ರಿಸುವ ಮೂಲಕ ಬಹಿರಂಗವಾಗಿ ಕ್ಷಮೆ ಕೇಳಿ ಎಂದು ಎಚ್ಚರಿಕೆಯ ಧಾಟಿಯಲ್ಲಿ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.