National
9 ವರ್ಷಗಳ ತಿರುವನಂತಪುರ ಅನಂತಪದ್ಮನಾಭ ಸ್ವಾಮಿ ದೇಗುಲ ವಿವಾದ ಇತ್ಯರ್ಥ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.
ನವದೆಹಲಿ,ಜುಲೈ 13: ಕೇರಳದ ತಿರುವನಂತಪುರದಲ್ಲಿರುವ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಪೂಜೆ ನಡೆಸುವ ಅಧಿಕಾರವನ್ನು ರಾಜಮನೆತನಕ್ಕೆ ವಹಿಸಿ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದೆ.
2009ರಲ್ಲಿ ಕೇರಳದ ತಿರುವನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪುರಾತನ ದೇಗುಲದಲ್ಲಿ ಅಗಾಧ ಪ್ರಮಾಣದ ಅತ್ಯಮೂಲ್ಯ ಸಂಪತ್ತು ಬಹಿರಂಗವಾಗಿತ್ತು. ಅದಾದ ಬಳಿಕ ‘ಅನಂತ’ ಸಂಪತ್ತಿನ ದೇಗುಲ ಯಾರಿಗೆ ಸೇರಬೇಕು ಎಂಬುದು ವಿವಾದದ ಗೂಡಾಗಿತ್ತು.
ಪದ್ಮನಾಭ ದೇವಸ್ಥಾನದ ನಿಧಿ ಕೋಣೆಗಳನ್ನು ತೆರೆಯಲು ಬಲವಾಗಿ ವಿರೋಧಿಸಿದವರಲ್ಲಿ ಟ್ರಾವಂಕೋರ್ ರಾಜಮನೆತನದವರು ಪ್ರಮುಖರು. ರಾಜಮನೆತನದವರು ಈ ದೇವಸ್ಥಾನವನ್ನು ತಮ್ಮ ಖಾಸಗಿ ಸ್ವತ್ತೆಂಬಂತೆ ವರ್ತಿಸುತ್ತಿದ್ದಾರೆಂದು ಕೆಲ ವಲಯಗಳಲ್ಲಿ ಅಸಮಾಧಾನವಿತ್ತು. 1991ರಲ್ಲೇ ಟ್ರಾವಂಕೋರ್ನ ಕೊನೆಯ ರಾಜ ಸಾವನ್ನಪ್ಪಿದ್ದಾರೆ. ಈಗ ಅವರ ಕುಟುಂಬಸ್ಥರಿಗೆ ದೇವಸ್ಥಾನದ ನಿರ್ವಹಣೆ ಮುಂದುವರಿಸುವುದು ಸಮಂಜಸವಲ್ಲ. ದೇವಸ್ಥಾನ ನಿರ್ವಹಣೆಗೆ ಮಂಡಳಿ ರಚಿಸಬೇಕೆಂದು ಕೆಲ ಭಕ್ತರು ಬೇಡಿಕೆ ಇಟ್ಟಿದ್ದರು. ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು, 9 ವರ್ಷಗಳ ಬಳಿಕ ಸುಪ್ರೀಂಕೋರ್ಟ್ ಟ್ರಾವಂಕೂರ್ ರಾಜಮನೆತದ ಪರವಾಗಿ ತೀರ್ಪು ಪ್ರಕಟಿಸಿದೆ.