LATEST NEWS
ತುರ್ತಾಗಿ ವಿಚಾರಣೆಗೆ ಅವಕಾಶ ಕೇಳಿದವರು ಈಗ ಏಕಾಏಕಿ ಮುಂದೂಡಿ ಎಂದರೆ ಏನರ್ಥ – ಸುಪ್ರೀಂಕೋರ್ಟ್
ನವದೆಹಲಿ ಅಗಸ್ಟ್ 29:ಶಾಲಾ ಮತ್ತು ಕಾಲೇಜು ತರಗತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶವನ್ನು ಮಾನ್ಯ ಮಾಡಿದ್ದ ಹೈಕೋರ್ಟ್ ತೀರ್ಪಿನ ವಿರುದ್ದ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು ಸುಪ್ರಿಂಕೋರ್ಟ್ ವಿಚಾರಣೆಗೆ ತೆಗೆದುಕೊಂಡಿದ್ದು, ರಾಜ್ಯ ಸರಕಾರಕ್ಕೆ ನೊಟೀಸ್ ಜಾರಿಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ ಈ ಮೇಲ್ಮನವಿ ವಿಚಾರಣೆಯನ್ನು ನಡೆಸಿತು. ಇವರ ಜತೆ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿರುವ ನ್ಯಾಯ ಪೀಠ ವಿಚಾರಣೆ ನಡೆಸುತ್ತಿದ್ದಾರೆ. ಈ ಮೇಲ್ಮನವಿಯ ವಿಚಾರಣೆಯನ್ನು ಬರುವ ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿದೆ.
ಇದರ ವಿಚಾರಣೆಯನ್ನು ಮುಂದೂಡುವಂತೆ ಅರ್ಜಿದಾರರು ಮನವಿ ಮಾಡಿಕೊಂಡಿದ್ದರು. ಆದರೆ ಇದನ್ನು ಪೀಠ ತಿರಸ್ಕರಿಸಿದ್ದು, ಸೆ.5ಕ್ಕೆ ವಿಚಾರಣೆ ಮುಂದೂಡಿದೆ. ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ಈ ಮೊದಲು ಪದೇ ಪದೇ ಕೇಳಿಕೊಳ್ಳಲಾಗಿತ್ತು. ಪರಿಸ್ಥಿತಿ ಹೀಗಿರುವಾಗ ವಿಚಾರಣೆಯನ್ನು ಮುಂದಕ್ಕೆ ಹಾಕಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟವಾಗಿ ನುಡಿಯಿತು. ಇವುಗಳ ವಿಚಾರಣೆಯನ್ನು ಮುಂದೂವಂತೆ ಕೇಳಿಕೊಂಡ ಮೇಲ್ಮನವಿದಾರರ ಪರ ವಕೀಲರ ಕ್ರಮಕ್ಕೆ ನ್ಯಾಯಪೀಠ ತೀವ್ರ ಅಸಮಾಧಾವನ್ನು ವ್ಯಕ್ತಪಡಿಸಿ, ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದಿತು. ವಿಚಾರಣೆ ತುರ್ತಾಗಿ ನಡೆಯಬೇಕು ಎಂದು ಕೇಳಿಕೊಂಡವರು ನೀವೆ. ಈಗ ಏಕಾಏಕಿ ಮುಂದೂಡಿ ಎಂದರೆ ಏನರ್ಥ? ಇಂಥ ಆಟವನ್ನು ನಾವು ಸಹಿಸುವುದಿಲ್ಲ ಎಂದು ಪೀಠ ಹೇಳಿತು.’