DAKSHINA KANNADA
ವ್ಯಾಜ್ಯಗಳಿರುವ ಮನೆ ಶಾಪಗ್ರಸ್ತ ಮನೆಯಂತೆ, ವ್ಯಾಜ್ಯಗಳು ಸಮಾಜಕ್ಕೆ ಅಂಟಿಕೊಂಡ ಕ್ಯಾನ್ಸರ್ – ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್
ಪುತ್ತೂರು ಡಿಸೆಂಬರ್ 28: ವ್ಯಾಜ್ಯಗಳಿರುವ ಮನೆ ಶಾಪಗ್ರಸ್ತ ಮನೆಯಂತೆ, ವ್ಯಾಜ್ಯಗಳು ಸಮಾಜಕ್ಕೆ ಅಂಟಿಕೊಂಡ ಕ್ಯಾನ್ಸರ್ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅಭಿಪ್ರಾಯಪಟ್ಟಿದ್ದಾರೆ.
ಪುತ್ತೂರಿನಲ್ಲಿ ನಡೆದ ಪುತ್ತೂರು ವಕೀಲರ ಭವನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ಯಾನ್ಸರ್ ನಂತೆ ಸಮಾಜದಲ್ಲಿ ಹರಡಿರುವ ವ್ಯಾಜ್ಯಗಳೆಂಬ ಈ ರೋಗವನ್ನು ನಿವಾರಿಸಲು ನ್ಯಾಯಾಂಗ ವ್ಯವಸ್ಥೆಗೆ ಹೆಚ್ಚಿನ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವ ಅಗತ್ಯವಿದೆ ಎಂದರು.
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಲ್ಪಿಸೋದು ಸರಕಾರ ಮುಖ್ಯ ಕರ್ತವ್ಯವಾಗಿದ್ದು, ಶಾಂತಿ ಸುವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ನ್ಯಾಯಾಂಗದ ಮೇಲೂ ಇದೆ ಎಂದ ಅವರು ನ್ಯಾಯಾಂಗ ವ್ಯವಸ್ಥೆಗೆ ಉತ್ತಮ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆಯನ್ನು ಸರಕಾರ ಮಾಡಬೇಕಿದೆ ಎಂದರು.
ನ್ಯಾಯಾಂಗ ವ್ಯವಸ್ಥೆಗೆ ಕಾಲಕ್ಕೆ ತಕ್ಕಂತೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ನ್ಯಾಯಾಂಗ ಮೂಲಭೂತ ಅಭಿವೃದ್ಧಿ ನಿಗಮ ಸ್ಥಾಪನೆಯ ಕುರಿತು ಚರ್ಚೆಯಲ್ಲಿದ್ದು, ಈ ವ್ಯವಸ್ಥೆ ಆರಂಭಗೊಂಡಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಇದು ಪೂರಕವಗಲಿದೆ ಎಂದು ಅವರು ಹೇಳಿದರು.