DAKSHINA KANNADA
ಪೊಲೀಸ್ ಅಧಿಕಾರಿ M K ಗಣಪತಿ ಆತ್ಮಹತ್ಯೆ ಪ್ರಕರಣ, ಸುಪ್ರೀಂ ಕೋರ್ಟ್ ನಿಂದ ಸಚಿವ ಕೆ.ಜೆ. ಜಾರ್ಜ್‌ಗೆ ಕ್ಲೀನ್ ಚೀಟ್..!
ಬೆಂಗಳೂರು ಆಗಸ್ಟ್ 28 : ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಸುಪ್ರೀಂ ಕೋರ್ಟ್ ಕ್ಲೀನ್‌ಚಿಟ್ ನೀಡಿದೆ. ಸಿಬಿಐ ಕ್ಲೀನ್ ಚಿಟ್ ಆದೇಶ ಪ್ರಶ್ನಿಸಿ ಗಣಪತಿ ಅವರ ಸೋದರಿ ಸಬಿತಾ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಗಣಪತಿ ಅವರ ಆತ್ಮಹತ್ಯೆಗೆ ಅಂದಿನ ಗೃಹ ಸಚಿವರಾಗಿದ್ದ ಕೆ ಜೆ ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಎಂ.ಎಂ. ಪ್ರಸಾದ್ ಮತ್ತು ಪ್ರಣವ್ ಮೊಹಂತಿ ಕಾರಣ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ ಈ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಬಿ ರಿಪೋರ್ಟ್ ಸಲ್ಲಿಸಿತ್ತು. ಸಿಬಿಐ ಆದೇಶವನ್ನು ಪ್ರಶ್ನಿಸಿ ಗಣಪತಿ ಅವರ ಸೋದರಿ ಸಬಿತಾ ಹಾಗೂ ಮತ್ತಿತರರು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದರು. ಅರ್ಜಿ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾ| ಬೇಲಾ ಎಂ. ತ್ರಿವೇದಿ ಮತ್ತು ನ್ಯಾ| ಸತೀಶ್‌ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠ ವಜಾಗೊಳಿಸಿದೆ.
ಪಶ್ಚಿಮ ವಲಯ (ಮಂಗಳೂರು) ಐಜಿಪಿ ಕಚೇರಿಯಲ್ಲಿ ಡಿವೈಎಸ್‌ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಣಪತಿ ಅವರು 2016ರ ಜು. 7ರಂದು ಮಡಿಕೇರಿಯ ಲಾಡ್ಜ್ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮೊದಲು ಆಗಿನ ಗೃಹಸಚಿವರಾಗಿದ್ದ ಕೆ.ಜೆ. ಜಾರ್ಜ್ ಹಾಗೂ ಐಪಿಎಸ್ ಅಧಿಕಾರಿಗಳಾದ ಪ್ರಸಾದ್ ಮತ್ತು ಮೊಹಾಂತಿ ತನಗೆ ಕಿರುಕುಳ ನೀಡಿದ್ದರು ಎಂದು ಟೀವಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.