LATEST NEWS
ಕಾಸರಗೋಡು ಅಣಕು ಮತದಾನದ ವೇಳೆ ಬಿಜೆಪಿಗೆ ಮತ ಪ್ರಕರಣ: ಇವಿಎಂ ಕುರಿತ ಆರೋಪದ ತನಿಖೆಗೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ
ಹೊಸದಿಲ್ಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ಮಾಡಿರುವ ಆರೋಪಗಳನ್ನು ಪರಿಶೀಲಿಸಿ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇವಿಎಂಗಳಲ್ಲಿ ಚಲಾವಣೆಯಾದ ಮತಗಳನ್ನು ವಿವಿಪ್ಯಾಟ್ ಸ್ಲಿಪ್‌ಗಳೊಂದಿಗೆ ತಾಳೆ ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಹಲವು ಅರ್ಜಿಗಳ ಪೈಕಿ ಅರ್ಜಿದಾರರೊಬ್ಬರ ವಕೀಲರಾದ ಪ್ರಶಾಂತ್ ಭೂಷಣ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮೇಲಿನ ಸೂಚನೆ ನೀಡಿದೆ. ದಯವಿಟ್ಟು ಈ ಆರೋಪಗಳನ್ನು ಪರೀಶೀಲಿಸಿ ತನಿಖೆ ನಡೆಸಿ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರ ದ್ವಿಸದಸ್ಯ ಪೀಠ ಆಯೋಗದ ವಕೀಲರಾದ ಮಣೀಂದರ್ ಸಿಂಗ್ ಅವರಿಗೆ ಹೇಳಿತು. ಕೇರಳದಲ್ಲಿ ಅಣಕು ಮತದಾನ ಫಲಿತಾಂಶಗಳ ಕುರಿತಾದ ವರದಿಯಲ್ಲಿ ಬಿಜೆಪಿಗೆ ಹೆಚ್ಚುವರಿ ಮತಗಳು ಬಿದ್ದಿರುವ ಕುರಿತು ಪ್ರಶಾಂತ್ ಭೂಷಣ್ ಉಲ್ಲೇಖಿಸಿದರು. ಎಪ್ರಿಲ್ 17ರಂದು ಕೇರಳದ ಕಾಸರಗೋಡಿನಲ್ಲಿ ನಡೆದ ಅಣಕು ಮತದಾನದಲ್ಲಿ ಕನಿಷ್ಠ ನಾಲ್ಕು ಇವಿಎಂಗಳು ಬಿಜೆಪಿ ಪರ ತಪ್ಪಾಗಿ ಮತಗಳನ್ನು ದಾಖಲಿಸಿದ್ದವು ಎಂಬ ಮಾಧ್ಯಮ ವರದಿಯನ್ನು ಭೂಷಣ್ ಉಲ್ಲೇಖಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರನ್ನೊಳಗೊಂಡ ವಿಭಾಗೀಯ ಪೀಠ ಇಂದು ವಿಚಾರಣೆ ಆರಂಭಿಸುತ್ತಿದ್ದಂತೆ, ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಕಾಸರಗೋಡಿನಲ್ಲಿ ನಡೆದ ಅಣಕು ಮತದಾನದಲ್ಲಿ ಬಿಜೆಪಿಗೆ ಹೆಚ್ಚು ಮತ ಒದಗಿಸುವ ನಾಲ್ಕು ಇವಿಎಂ ಗಳು ಪತ್ತೆಯಾಗಿರುವುದನ್ನು ಪೀಠದ ಗಮನಕ್ಕೆ ತಂದರು. ಈ ಸಂಬಂಧ ಮನೋರಮಾ ಪತ್ರಿಕೆಯಲ್ಲಿ ಬಂದಿರುವ ವರದಿಯನ್ನು ಸಹ ಪೀಠಕ್ಕೆ ಸಲ್ಲಿಸಿದರು.
ಚುನಾವಣಾ ಆಯೋಗ ಇದುವರೆಗೆ ಒಂದು ವಿಧಾನಸಭಾ ವ್ಯಾಪ್ತಿಯಲ್ಲಿ ಐದು ಇವಿಎಂಗಳನ್ನು ಆಯ್ಕೆ ಮಾಡಿ ವಿವಿಪ್ಯಾಟ್ ಚೀಟಿಯನ್ನು ಎಣಿಕೆ ಮಾಡಿ ತಾಳೆ ಹಾಕುತ್ತಿದೆ. ಇದನ್ನು ಬದಲಿಸಿ, ಎಲ್ಲ ಇವಿಎಂಗಳು ಮತ್ತು ವಿವಿ ಪ್ಯಾಟ್ ಗಳನ್ನು ತಾಳೆ ಹಾಕಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಅಷ್ಟೇ ಅಲ್ಲದೆ, ವಿವಿ ಪ್ಯಾಟ್ ಹಾಳೆಗಳನ್ನು ಮತ ಚಲಾಯಿಸಿದ ನಂತರ ಮತದಾರರೇ ಬ್ಯಾಲೆಟ್ ಬಾಕ್ಸ್ ಗಳಿಗೆ ಹಾಕುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಕೋರಿದ್ದಾರೆ.
ಈ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಕಾಸರಗೋಡಿನಲ್ಲಿ ನಡೆದಿರುವ ಘಟನೆಯನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ.
ಕಾಸರಗೋಡಿನಲ್ಲಿ ಆಗಿದ್ದೇನು?
ದೇಶದ ಹಲವು ಭಾಗಗಳಲ್ಲಿ ಚುನಾವಣಾ ಆಯೋಗ ಅಣಕು ಮತದಾನ, ಮತ ಎಣಿಕೆ ಕಾರ್ಯಗಳನ್ನು ನಿನ್ನೆ ಸಂಘಟಿಸಿತ್ತು. ಇದರ ಅಂಗವಾಗಿ ಕಾಸರಗೋಡಿನಲ್ಲೂ ಸಹ ಅಣಕು ಮತದಾನ ನಡೆದಿತ್ತು. ಈ ಮತದಾನದ ಸಂದರ್ಭದಲ್ಲಿ ಕನಿಷ್ಠ ನಾಲ್ಕು ಮತಯಂತ್ರಗಳು ಬಿಜೆಪಿಗೆ ಹೆಚ್ಚಿನ ಮತಗಳನ್ನು ಒದಗಿಸುವುದು ಪತ್ತೆಯಾಗಿತ್ತು. ಬಿಜೆಪಿಗೆ ಒಬ್ಬ ಮತದಾರರ ಒಂದು ಮತ ನೀಡಲು ಯಂತ್ರದ ಬಟನ್ ಒತ್ತಿದರೆ ಬಿಜೆಪಿಗೆ ಎರಡು ಮತಗಳು ಲಭ್ಯವಾಗುವಂತೆ ಇವಿಎಂ ತಿರುಚಿರುವುದು ಬೆಳಕಿಗೆ ಬಂದಿತ್ತು. ಇದೇ ಸಂದರ್ಭದಲ್ಲಿ ಇತರ ಪಕ್ಷಗಳಿಗೆ ನೀಡಿದ ಮತಗಳು ಮಾತ್ರ ಒಂದು ಪ್ರೆಸ್ ಗೆ ಒಂದೇ ಮತ ದಾಖಲಾಗುತ್ತಿರುವುದು ಕಂಡುಬಂದಿತ್ತು. ಅಷ್ಟೇ ಅಲ್ಲದೆ, ಇವಿಎಂ ಮೇಲಿನ ಪಕ್ಷಗಳ ಚಿಹ್ನೆಗಳ ಚಿತ್ರಗಳಲ್ಲೂ ತಾರತಮ್ಯ ಎಸಗಿರುವುದು ಕಂಡುಬಂದಿತ್ತು. ಇತರ ಎಲ್ಲ ಪಕ್ಷಗಳ ಚಿಹ್ನೆಗಳಿಗಿಂತ ಕಾಂಗ್ರೆಸ್ ಪಕ್ಷದ ಹಸ್ತ ಚಿಹ್ನೆಯನ್ನು ಚಿಕ್ಕದಾಗಿ ಈ ಇವಿಎಂಗಳಲ್ಲಿ ಮುದ್ರಿಸಲಾಗಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿವೆ.