LATEST NEWS
ನ್ಯಾಯಾಂಗ ನಿಂದನೆ ಪ್ರಕರಣ: ವಕೀಲ ಪ್ರಶಾಂತ್ ಭೂಷಣ್‌ಗೆ ₹1 ದಂಡ ವಿಧಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ₹1 ದಂಡ ವಿಧಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್ಎ ಬೊಬಡೆ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ಮಾಡಿದ್ದ ಟ್ವೀಟ್‌ಗಳ ಕಾರಣ ಕೋರ್ಟ್ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು.ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ಸೋಮವಾರ ತೀರ್ಪು ನೀಡಿದೆ.
ಸೆಪ್ಟೆಂಬರ್ 15ರೊಳಗೆ ಪ್ರಶಾಂತ್ ಭೂಷಣ್ ಅವರು ದಂಡ ಪಾವತಿಸಬೇಕು. ಇಲ್ಲವಾದಲ್ಲಿ 3 ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಹಾಗೂ 3 ವರ್ಷಗಳು ವಕೀಲಿಕೆಯಿಂದ ನಿರ್ಬಂಧಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಸುಪ್ರೀಂಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿಯ ಘನತೆಗೆ ಚ್ಯುತಿ ತರುವಂತಹ ಟ್ವೀಟ್ ಮಾಡಿದ್ದ ಪ್ರಕರಣದಲ್ಲಿ ಪ್ರಶಾಂತ್ ತಪ್ಪಿತಸ್ಥರು ಎಂದು ಆಗಸ್ಟ್14ರಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಪ್ರಶಾಂತ್ ಭೂಷಣ್ ಮಾಡಿದ್ದ ಎರಡು ಟ್ವೀಟ್‌ಗಳು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಸಮ ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಹೇಳಿತ್ತು.
ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕ್ಷಮೆಯಾಚಿಸಲು ಹಿರಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ನಿರಾಕರಿಸಿದ್ದರು. ‘ಅಪ್ರಾಮಾಣಿಕವಾಗಿ ಕ್ಷಮೆಯಾಚಿಸಿದರೆ ನನ್ನ ಆತ್ಮಸಾಕ್ಷಿಗೆ ಮೋಸ ಮಾಡಿದಂತಾಗುತ್ತದೆ’ ಎಂದು ಹೇಳಿದ್ದರು.

ಸುಪ್ರೀಂ ಕೋರ್ಟ್‌ನ ಈ ಹಿಂದಿನ ಕೆಲವು ಮುಖ್ಯ ನ್ಯಾಯಮೂರ್ತಿಗಳಿಗೆ (ಸಿಜೆಐ) ಸಂಬಂಧಿಸಿದಂತೆ ಹಾಗೂ ಇನ್ನೊಂದು ಟ್ವೀಟ್, ಹಾಲಿ ಸಿಜೆಐ ಅವರ ಚಿತ್ರವೊಂದನ್ನು ಉಲ್ಲೇಖಿಸಿ ಮಾಡಿದ್ದಾಗಿತ್ತು. ಟ್ವೀಟ್‌ಗಳ ಮೂಲಕ ಪ್ರಶಾಂತ್ ಭೂಷಣ್ ಅವರು ಆಡಿರುವ ಮಾತುಗಳು ‘ಕೀಳು, ಹಗೆತನದಿಂದ’ ಕೂಡಿದವು ಎಂದು ಕೋರ್ಟ್ ಹೇಳಿತ್ತು.
ಜೂನ್ 27 ಹಾಗೂ 29ರಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದರು. ಕಳೆದ ಆರು ವರ್ಷಗಳಲ್ಲಿ ‘ಭಾರತದ ಪ್ರಜಾಪ್ರಭುತ್ವದ ನಾಶ’ದಲ್ಲಿ ಸುಪ್ರೀಂ ಕೋರ್ಟ್ ಪಾತ್ರ ವಹಿಸಿದೆ ಎಂದು ಜೂನ್ 27ರಂದು ಭೂಷಣ್ ಮಾಡಿದ್ದ ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಆ ಬಗ್ಗೆ ಗ್ವಾಲಿಯರ್ ಮೂಲದ ವಕೀಲರೊಬ್ಬರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ಬಳಿಕ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು. ಅರುಣ್ ಮಿಶ್ರಾ ಅವರಿದ್ದ ನ್ಯಾಯಪೀಠವು ಜುಲೈ 22ರಂದು ಭೂಷಣ್‌ಗೆ ನೋಟಿಸ್ ನೀಡಿತ್ತು. ಈ ಮಧ್ಯೆ, ಭೂಷಣ್ ಮಾಡಿದ್ದ ಟ್ವೀಟ್‌ಗಳನ್ನು ಟ್ವಿಟರ್ ಅಳಿಸಿಹಾಕಿತ್ತು.