LATEST NEWS
ಡೈವೋರ್ಸ್ ಗೆ ಆರು ತಿಂಗಳು ಕಾಯುವಿಕೆ ಕಡ್ಡಾಯವಲ್ಲ – ಸುಪ್ರೀಂಕೋರ್ಟ್
ನವದೆಹಲಿ ಮೇ 02: ವಿವಾಹ ವಿಚ್ಚೇದನ ಕುರಿತಾಗಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ವಿಚ್ಚೇದನ ಪಡೆಯಲು ದಂಪತಿಗೆ ಪರಸ್ಪರ ಒಪ್ಪಿಗೆ ಇದ್ದಲ್ಲಿ 6 ತಿಂಗಳು ಕಾಯಬೇಕೆಂದಿಲ್ಲ. ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಇಲ್ಲದೆಯೇ ಸುಪ್ರೀಂ ಕೋರ್ಟ್ ತನ್ನ ಪರಮಾಧಿಕಾರ ಬಳಸಿ ವಿಚ್ಚೇದನವನ್ನು ಊರ್ಜಿತಗೊಳಿಸಬಹುದು ಎಂದು ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠ ಮಹತ್ವದ ಆದೇಶ ನೀಡಿದೆ.
ಸರಿಪಡಿಸಲು ಸಾಧ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ಮುರಿದುಬಿದ್ದ ಮದುವೆ ಪ್ರಕರಣಗಳಲ್ಲಿ ತನ್ನ ವಿಶೇಷಾಧಿಕಾರ ಬಳಸಿಕೊಂಡು, ಆರು ತಿಂಗಳ ಕಡ್ಡಾಯ ಕಾಯುವಿಕೆ ಮತ್ತು ಸಂಬಂಧಿತ ಪ್ರಕ್ರಿಯೆಗಳನ್ನು ರದ್ದುಪಡಿಸಿ ವಿಚ್ಛೇದನ ನೀಡಬಹುದು’ ಎಂದು ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಒಮ್ಮತದ ತೀರ್ಪು ನೀಡಿದೆ.
ಒಮ್ಮತದ ವಿಚ್ಛೇದನ ಬಯಸುತ್ತಿ ರುವ ದಂಪತಿಯು, ವಿಚ್ಛೇದನ ಪಡೆಯುವ ಮೊದಲು ಆರು ತಿಂಗಳ ಕಡ್ಡಾಯ ಕಾಯುವಿಕೆ (ಕೂಲಿಂಗ್ ಆಫ್ ಪೀರಿಯಡ್) ಪೂರೈಸಬೇಕು ಎಂದು ಹಿಂದೂ ವಿವಾಹ ಕಾಯ್ದೆಯ 13ನೇ ಬಿ ಸೆಕ್ಷನ್ ಹೇಳುತ್ತದೆ. ಸಂವಿಧಾನದ 142 (1)ನೇ ವಿಧಿಯು ನೀಡಿರುವ ವಿಶೇಷಾಧಿಕಾರವನ್ನು ಬಳಸಿಕೊಂಡು ಸುಪ್ರೀಂ ಕೋರ್ಟ್, ಆರು ತಿಂಗಳ ಕಡ್ಡಾಯ ಕಾಯುವಿಕೆಯನ್ನು ರದ್ದುಪಡಿಸಬಹುದೇ ಎಂದು ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠವು ಈ ತೀರ್ಪು ನೀಡಿದೆ.