LATEST NEWS
ಸುಳ್ಯದ ಮಂಡೆಕೋಲಿಗೆ ದಾಂಗುಡಿ ಇಟ್ಟ ಕಾಡಾನೆಗಳು : ಭಯದಲ್ಲಿ ಗ್ರಾಮಸ್ಥರು..!

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಮಂಡೆಕೋಲು ಗಡಿ ಪ್ರದೇಶಕ್ಕೆ ಕಾಡಾನೆಗಳು ದಾಂಗುಡಿ ಇಟ್ಟಿದ್ದು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ.
ಒಂಬತ್ತು ಕಾಡಾನೆಗಳ ಹಿಂಡು ಮಂಡೆಗೋಲು ಪರಿಸರದ ಸುತ್ತಮುತ್ತ ಸಂಚರಿಸುತ್ತಿದ್ದು ಜನ ಮನೆಯಿಂದ ಹೊರ ಬಾರದ, ಮನೆಯಲ್ಲೂ ಇರಲೂ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ವಿವಿಧ ಭಾಗಗಳಲ್ಲಿ ಕಾಡಾನೆಗಳ ದಾಳಿ ಕಳೆದ 2 ತಿಂಗಳಿನಿಂದ ತೀವ್ರಗೊಂಡಿದೆ.

ಮಂಡೆಕೋಲು ಗ್ರಾಮದ ಮುರೂರು ಭಾಗದಲ್ಲಿ ಭಾನುವಾರ ರಾತ್ರಿ ಆನೆಗಳ ಹಿಂಡು ದಾಳಿ ಮಾಡಿ ಕೃಷಿ ಹಾನಿ ಮಾಡಿತ್ತು. ಹಲವು ದಿನಗಳಿಂದ ಈ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು ಕೃಷಿಕರು ಕಂಗಲಾಗಿದ್ದಾರೆ. ಮುರೂರು ಭಾಗದಲ್ಲಿ ಆನೆಗಳು ತೆಂಗು, ಬಾಳೆ, ಅಡಿಕೆ ಕೃಷಿ ನಾಶ ಮಾಡಿದೆ. ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ಸೇರಿ ಪಟಾಕಿ ಸಿಡಿಸಿ ಆನೆಗಳನ್ನು ದೂರ ಸರಿಸಿದ್ದರೂ. ಅಂಚಿನ ಕಾಡಿನಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು ಪದೇ ಪದೇ ನಾಡಿಗೆ ಇಳಿದು ಕೃಷಿ ನಾಶ ಮಾಡುತ್ತಿದೆ.
ಪಂಜಿಕಲ್ಲು ಭಾಗದಲ್ಲಿ ಕಾಡಾನೆಗಳ ಹಿಂಡು ರಸ್ತೆ ದಾಟುವ ವೀಡಿಯೋ ಒಂದು ವೈರಲ್ ಆಗಿದೆ. ಜನವಸತಿ ಪ್ರದೇಶ, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯಾಗಿ ಕಾಡಾನೆಗಳ ಹಿಂಡು ಪ್ರತ್ಯಕ್ಷಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದ್ದು ಅರಣ್ಯಾಧಿಕಾರಿಗಳು ಕ್ರಮ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. .