BANTWAL
ಸುಳ್ಳಮಲೆ ಗುಹಾತೀರ್ಥ ಸ್ನಾನ ಇಂದಿನಿಂದ ಆರಂಭ

ಸುಳ್ಯ ಸೆಪ್ಟೆಂಬರ್ 15: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯ ಸಮೀಪ ಮಾಣಿ ಗ್ರಾಮದ ಶಂಭುಗ ಗುಡ್ಡಚಾಮುಂಡಿ ಪಂಜುರ್ಲಿ ಮಲೆಕೊರತಿ ದೈವಸ್ಥಾನದ ವ್ಯಾಪ್ತಿಯ ಸುಳ್ಳಮಲೆ ಗುಹಾತೀರ್ಥ ಸ್ನಾನ ಇಂದಿನಿಂದ ನಡೆಯಲಿದೆ.
ಸೆಪ್ಟೆಂಬರ್ 15 ಶುಕ್ರವಾರದಿಂದ ಸೆಪ್ಟೆಂಬರ್ 19 ರಂದು ಮಂಗಳವಾರದ ಭಾದ್ರಪದ ಶುಕ್ಲ ಚೌತಿಯವರೆಗೆ ಜರುಗಲಿದೆ. ಸೋಣ ಅಮಾವಾಸ್ಯೆಯಂದು ಬಿದಿರಿನ ಕೇರ್ಪು(ಏಣಿ) ಇಡುವ ಸಂಪ್ರದಾಯದ ಬಳಿಕ ಅರಸು ಶ್ರೀ ಗುಡ್ಡೆ ಚಾಮುಂಡಿ ಮತ್ತು ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ಒಳಗೊಂಡಂತೆ ಅನೇಕ ವಿಧಿ ವಿಧಾನದ ಬಳಿಕ ಭಕ್ತಾದಿಗಳಿಗೆ ತೀರ್ಥ ಸ್ನಾನಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಲಾಗುತ್ತದೆ.

ತೀರ್ಥ ಸ್ನಾನಕ್ಕೆ ಬರುವ ಭಕ್ತಾದಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಬರುವ ಮೂಲಕ ತೀರ್ಥಕ್ಷೇತದ ಪಾವಿತ್ರ್ಯತೆಯನ್ನು ಕಾಪಾಡುವಂತೆ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಅವರು ಮನವಿ ಮಾಡಿದ್ದಾರೆ
ಈ ಗುಹಾಲಯವಿರುವ ಪ್ರದೇಶಕ್ಕೆ ವರ್ಷದಲ್ಲಿ ಐದು ದಿನ ಮಾತ್ರ ಪ್ರವೇಶ. ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಇಲ್ಲಿ ಕೆಲಕಾಲ ನೆಲೆಸಿದ್ದರು ಎಂಬ ಇತಿಹಾಸವೂ ಇದೆ. ನೂರಾರು ವರ್ಷಗಳಿಂದ ಇಕ್ಕಿ ತೀರ್ಥ ಸ್ನಾನ ನಡೆಯುತ್ತಾ ಬಂದಿದೆ ಎನ್ನುವ ಸ್ಥಳೀಯರಲ್ಲಿ ಎಷ್ಟು ವರ್ಷಗಳಿಂದ ನಡಯುತ್ತಾ ಬರುತ್ತಿದೆ ಎಂಬ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಪೂರ್ವಜರ ಸಂಪ್ರದಾಯ ಮುಂದುವರಿದಿದೆ ಎಂದಷ್ಟೇ ಹೇಳುತ್ತಾರೆ.