LATEST NEWS
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆ ಪ್ರಕರಣ – ಮತ್ತೆ ಮೂವರು ಆರೋಪಿಗಳು ಅರೆಸ್ಟ್

ಮಂಗಳೂರು ಮೇ 14: ಬಜ್ಪೆಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಳವಾರು ಗ್ರಾಮದ ಅಝರುದ್ದೀನ್ ಯಾನೆ ಅಝರ್ ಯಾನೆ ಅಜ್ಜು (29), ಬಜ್ಪೆಯಲ್ಲಿ ವಾಸವಾಗಿರುವ ಅಬ್ದುಲ್ ಖಾದರ್ ಯಾನೆ ನೌಫಲ್ (24), ಮೂಲತಃ ಫರಂಗಿಪೇಟೆ ಕುಂಪನಮಜಲಿನ ಪ್ರಸಕ್ತ ಹಾಸನ ಜಿಲ್ಲೆ ಕೆ.ಆರ್.ಪುರಂ ನಿವಾಸಿ ನೌಷಾದ್ ಯಾನೆ ವಾಮಂಜೂರು ನೌಷಾದ್ (39) ಎಂದು ಗುರುತಿಸಲಾಗಿದೆ.
ಆರೋಪಿಗಳ ಪೈಕಿ ಅಝರುದ್ದೀನ್ ಎಂಬಾತನ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ರಾಣೆಗಳಲ್ಲಿ 3 ಕಳವು ಪ್ರಕರಣ ದಾಖಲಾಗಿದೆ. ಈತನು ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿಯನ್ನು ನೀಡಿ ಕೊಲೆಗೆ ಸಹಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಬ್ದುಲ್ ಖಾದರ್ ಎಂಬಾತನು ಆರೋಪಿಗಳು ಕೊಲೆ ಕೃತ್ಯ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗುವ ವೇಳೆ ಆರೋಪಿಗಳಿಗೆ ಸಹಕರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೋರ್ವ ಆರೋಪಿ ನೌಷಾದ್ ಎಂಬಾತನು ಇತರ ಆರೋಪಿಗಳ ಜೊತೆ ಕೊಲೆಗೆ ಸಂಚು ರೂಪಿಸಿದ್ದ. ಈತನು ಈ ಹಿಂದೆ ಸುರತ್ಕಲ್, ಬಜ್ಪೆ, ಮೂಡುಬಿದಿರೆ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆಗೆ ಸಂಚು ಸಹಿತ 6 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪೈಕಿ ಅಝರುದ್ದೀನ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇತರ ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.