FILM
ಒಬ್ಬ ಸುದೀಪ್ ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದು ಎಂದು ಅವರು ತಿಳಿದಂತಾಗುತ್ತದೆ – ಕೋರ್ಟ್ ನಲ್ಲಿ ಸುದೀಪ್ ಹೇಳಿಕೆ
ಬೆಂಗಳೂರು ಅಗಸ್ಟ್ 11: ನಟ ಸುದೀಪ್ ಹಾಗೂ ನಿರ್ಮಾಪಕ ಎಂ.ಎನ್ ಕುಮಾರ್ ನಡುವೆ ನಡೆಯುತ್ತಿರುವ ಕಾನೂನು ಸಮರ ಮುಂದುವರೆದಿದ್ದು, ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಸುದೀಪ್ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ನಗರದ 13 ನೇ ಎಸಿಎಂಎಂ ಕೋರ್ಟ್ ಗೆ ಖುದ್ದು ಹಾಜರಾಗಿ ನಟ ಸುದೀಪ್ ಗುರುವಾರ ತಮ್ಮ ಸ್ವಯಂ ಹೇಳಿಕೆ ದಾಖಲಿಸಿದರು. ನ್ಯಾಯಾಧೀಶ ವೆಂಕಣ್ಣ ಬಸಪ್ಪ ಹೊಸಮನಿ ಅವರು ಹೇಳಿಕೆ ದಾಖಲು ಮಾಡಿಕೊಂಡು ಆದೇಶವನ್ನು ಇಂದು ಕಾಯ್ದಿರಿಸಿದ್ದಾರೆ.
ನಟ ಸುದೀಪ್ ತಮ್ಮ ಹೇಳಿಕೆಯಲ್ಲಿ, ನಿರ್ಮಾಪಕ ಎಂ.ಎನ್. ಕುಮಾರ್ ಮಾಧ್ಯಮ ಗೋಷ್ಟಿಯಲ್ಲಿ ನನ್ನ ವಿರುದ್ದ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ಹಣದ ನೆರವಿನ ಆರೋಪವೂ ಸುಳ್ಳು. ಕುಮಾರ್ ಹೇಳಿಕೆಯನ್ನು ಎಂ.ಎನ್. ಸುರೇಶ್ ಬೆಂಬಲಿಸಿದ್ದಾರೆ. ಈ ಕುರಿತಾಗಿ ಹಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಕುಮಾರ್ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಇವರ ಮಾಧ್ಯಮ ಗೋಷ್ಟಿಯಿಂದ ನನ್ನ ಮಾನಹಾನಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ತಮ್ಮ ಹೇಳಿಕೆಗೆ ಪೂರಕವಾಗಿ ಕೆಲವು ಫೋಟೊಗಳನ್ನೂ ನ್ಯಾಯಾಧೀಶರಿಗೆ ನೀಡಿದ್ದು, ಹೇಳಿಕೆ ದಾಖಲು ಮಾಡಿಕೊಂಡ ನ್ಯಾಯಾಧೀಶರು, “ಒಂದು ವೇಳೆ ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ನೀವು ಅವರನ್ನು ಕ್ಷಮಿಸುತ್ತೀರಾ ರಾಜಿ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ” ಎಂದು ಪ್ರಶ್ನಿಸಿದರು. ಈ ವೇಳೆ ನಟ ಸುದೀಪ್, ಒಬ್ಬ ಸುದೀಪ್ ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದು ಎಂದು ಅವರು ತಿಳಿದಂತಾಗುತ್ತದೆ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.