Connect with us

    FILM

    ಬಿಜೆಪಿ ಪರವಾಗಿ ಪ್ರಚಾರಕ್ಕೆ ಹೊರಟ ಸುದೀಪ್ : ‘ಮಾಮಾ’ಗಾಗಿ ಇದೆಲ್ಲ ಎಂದ ಕಿಚ್ಚ

    ಬೆಂಗಳೂರು, ಎಪ್ರಿಲ್ 05: ನಟ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿಯೇ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್, ಬಿಜೆಪಿ ಸೇರುವ ವಿಚಾರ ಮಾತನಾಡಲಿಲ್ಲ. ಪಕ್ಷದ ಪರವಾಗಿ ಪ್ರಚಾರ ಮಾಡುವೆ ಅಂತಾನೂ ಹೇಳಲಿಲ್ಲ. ಬಸವರಾಜ ಬೊಮ್ಮಾಯಿ ಪರವಾಗಿ ನಿಂತುಕೊಳ್ಳುತ್ತೇನೆ ಎಂದಷ್ಟೇ ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ‘ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನು ನಾನು ಚಿಕ್ಕಂದಿನಿಂದಲೇ ಮಾಮಾ ಎಂದು ಕರೆಯುತ್ತಿದ್ದೆ. ಈಗಲೂ ಅವರನ್ನು ಹಾಗೆಯೇ ಕರೆಯುವೆ. ನಾನು ಸಿನಿಮಾ ರಂಗಕ್ಕೆ ಬರುವಾಗ ತುಂಬಾ ಕಷ್ಟದ ದಿನಗಳಲ್ಲಿ ಇದ್ದೆ. ಅವತ್ತು ನನಗೆ ಸಪೋರ್ಟ್ ಮಾಡಿದವರು ಅವರು. ಹಾಗಾಗಿ ಅವರಿಗೆ ನಾನು ಸಪೋರ್ಟ್ ಕೊಡುತ್ತಿದ್ದೇನೆ. ನನ್ನ ಸ್ನೇಹಿತರೂ ಇಲ್ಲಿದ್ದಾರೆ. ಅವರ ಪರವಾಗಿ ನಾನು ನಿಲ್ಲುತ್ತೇನೆ’ ಎಂದರು.

    ಬಿಜೆಪಿ ಜೊತೆಗಿನ ಬಾಂಧವ್ಯದ ಕುರಿತು ಮಾತನಾಡಿರುವ ಸುದೀಪ್, ‘ನನಗೆ ಆತ್ಮೀಯರು, ಆಪ್ತರು ತುಂಬಾ ಜನ ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ. ಅಲ್ಲದೇ, ಅವರು ನನ್ನ ಕಷ್ಟದ ಕಾಲದಲ್ಲಿ ಕೈ ಹಿಡಿದಿದ್ದಾರೆ. ಅವರ ಪರವಾಗಿ ನಿಲ್ಲಬೇಕಾಗಿದ್ದು ನನ್ನ ಕರ್ತವ್ಯ ಈ ಕಾರಣದಿಂದಾಗಿ ನಾನು ಇಂಥದ್ದೊಂದು ನಿರ್ಧಾರವನ್ನು ತಗೆದುಕೊಂಡಿದ್ದೇನೆ’ ಎಂದರು.

    ಬಿಜೆಪಿ ಜೊತೆಗಿನ ಸಂಬಂಧವನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ‘ಈ ಸಂದರ್ಭದಲ್ಲಿ ಒಂದು ಸ್ಪಷ್ಟನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇದನ್ನು ಅಭಿಮಾನಿಗಳಿಗೆ ಸ್ಪಷ್ಟನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ಟಿಕೆಟ್ ಕೇಳುವುದಿಲ್ಲ’ ಎಂದಿದ್ದಾರೆ ಸುದೀಪ್.

    ಈ ಕುರಿತಂತೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆರಂಭಿಸಿದ್ದಾರೆ. ನೆಚ್ಚಿನ ನಟ ಈಗಾಗಲೇ ತಮ್ಮದೇ ಟ್ರಸ್ಟ್ ಮೂಲಕ ಸಮಾಜಸೇವೆ ಆರಂಭಿಸಿದ್ದಾರೆ. ರಾಜಕಾರಣಕ್ಕೆ ಹೋದರೆ ಮತ್ತಷ್ಟು ಸಹಾಯ ಮಾಡಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ಅವರು ರಾಜಕೀಯ ಕ್ಷೇತ್ರಕ್ಕೆ ಹೋಗುವುದು ಬೇಡ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply