FILM
ಸೆಲೆಬ್ರಿಟಿಗಳು ದೇವರಲ್ಲ – ಅಪರಾಧಿಗೆ ಶಿಕ್ಷೆಯಾದ್ರೆ ಚಿತ್ರರಂಗ ಖುಷಿಪಡುತ್ತೆ – ನಟ ಸುದೀಪ್ ಪ್ರತಿಕ್ರಿಯೆ
ಬೆಂಗಳೂರು ಜೂನ್ 16: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ನಟ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಚಿತ್ರರಂಗಕ್ಕೆ ನ್ಯಾಯ ಸಿಗಬೇಕು. ಎಲ್ಲ ಕಾರಣಕ್ಕೂ ಚಿತ್ರರಂಗದ ಮೇಲೆ ಆರೋಪ ಬರುತ್ತದೆ. ಚಿತ್ರರಂಗಕ್ಕೆ ಒಂದು ಕ್ಲೀನ್ಚಿಟ್ ಬೇಕಾಗಿದೆ. ಕಲಾವಿದರು ತುಂಬ ಜನ ಇದ್ದಾರೆ. ಚಿತ್ರರಂಗ ಎಂದರೆ ಒಬ್ಬರು-ಇಬ್ಬರು ಅಲ್ಲ. ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸುದೀಪ್ ಸೆಲೆಬ್ರಿಟಿ ಅಂದ ಮಾತ್ರಕ್ಕೆ ನಾವ್ಯಾರೂ ದೇವರಲ್ಲ. ಅಭಿಮಾನಿಗಳು ಆ ರೀತಿ ಭಾವಿಸಬೇಡಿ. ನಾವು ಮಾಡೋದೆಲ್ಲ ಸರಿನೇ ಮಾಡಬೇಕು ಅನ್ನೋ ಒತ್ತಡವನ್ನೂ ಹಾಕಬೇಡಿ. ಏಕೆಂದರೆ ತಪ್ಪು ಮಾಡೋನೆ ಮನುಷ್ಯ, ಫ್ಲಾಪ್‌ಗಳನ್ನ ಕೊಡೋನೇ ಹೀರೋ ಅಂತ ಹೇಳಿದ್ದಾರೆ. ನನಗೆ ಗೊತ್ತಿರೋದು ಇಷ್ಟೇ.. ನೀವು (ಮಾಧ್ಯಮ) ಏನು ತೋರಿಸುತ್ತಿದ್ದೀರೋ ನಾವು ಅದನ್ನೇ ನೋಡಿ ವಿಚಾರ ತಿಳಿದುಕೊಳ್ಳುತ್ತಿದ್ದೇವೆ. ಅದರಲ್ಲಿ ಅರ್ಥ ಆಗಿರೋದು ಏನೆಂದರೆ, ಮಾಧ್ಯಮ ಮತ್ತು ಪೊಲೀಸ್ ಸಿಬ್ಬಂದಿ ಬಹಳ ಪ್ರಯತ್ನ ಹಾಕಿ ಸತ್ಯಾಂಶ ಹೊರತರಲು ಸಾಕಷ್ಟು ಕೆಲಸ ಮಾಡುತ್ತಿದ್ದೀರಿ. ಅದರಲ್ಲಿ ಎರಡನೇ ಮಾತೇ ಇಲ್ಲ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
‘ನನಗೆ ಗೊತ್ತಿರುವ ಹಾಗೆ, ಇತ್ತೀಚಿಗೆ ನಾನು ನಿಮ್ಮ ನ್ಯೂಸ್ನಲ್ಲಿ ನೋಡಿದ್ದು, ಸಿಎಂ ಅವರೇ ಈ ಪ್ರಕರಣದ ಬಗ್ಗೆ ಹಠ ಹಿಡಿದು ಕೂತಿದ್ದಾರೆ. ಕರ್ನಾಟಕದ ದೊಡ್ಡ ಸ್ಥಾನದಲ್ಲಿ ಇರುವ ಅವರು, ಮಾಧ್ಯಮದವರು ಹಾಗೂ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದಾಗ, ಕಾಮನ್ ಮ್ಯಾನ್ ಆಗಿ ನನ್ನ ಪ್ರಕಾರ ಕಲಾವಿದರ ಹೆಸರು ಬರಲ್ಲ. ನಾನು ಅವರ ಪರ, ಇವರ ಪರ ಅಂತ ಮಾತಾಡುವುದು ತಪ್ಪಾಗುತ್ತದೆ. ವಿರುದ್ಧವಾಗಿ ಮಾತನಾಡಿದರೂ ತಪ್ಪಾಗತ್ತೆ’ ಎಂದಿದ್ದಾರೆ ಸುದೀಪ್.