DAKSHINA KANNADA
ಚಾರಣಕ್ಕೆ ತೆರಳಿದ ಕಾಲು ಮುರಿದುಕೊಂಡ ಯುವತಿಯ ಹೊತ್ತು ತಂದ ಸುಬ್ರಹ್ಮಣ್ಯದ ಟ್ಯಾಕ್ಸಿ ಚಾಲಕರು

ಚಾರಣಕ್ಕೆ ತೆರಳಿದ ಕಾಲು ಮುರಿದುಕೊಂಡ ಯುವತಿಯ ಹೊತ್ತು ತಂದ ಸುಬ್ರಹ್ಮಣ್ಯದ ಟ್ಯಾಕ್ಸಿ ಚಾಲಕರು
ಸುಬ್ರಹ್ಮಣ್ಯ ಅಕ್ಟೋಬರ್ 15: ಕುಮಾರಪರ್ವತಕ್ಕೆ ಚಾರಣಕ್ಕೆ ತೆರಳಿದ ಸಂದರ್ಭ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಯುವತಿಯೊಬ್ಬಳನ್ನು ಸುಬ್ರಹ್ಮಣ್ಯದ ಟ್ಯಾಕ್ಸಿ ಚಾಲಕರು ಸುರಕ್ಷಿತವಾಗಿ ಹೊತ್ತು ತಂದಿದ್ದಾರೆ. ಟ್ಯಾಕ್ಸಿ ಚಾಲಕರ ಈ ಕಳಕಳಿಗೆ ಈ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಕುಮಾರಪರ್ವತಕ್ಕೆ ಚಾರಣಕ್ಕೆ ತೆರಳಿದ 23 ಜನ ಚಾರಣಿಗರ ಪೈಕಿ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಯುವತಿ ದಾರಿ ಮಧ್ಯೆ ಕಾಲು ಜಾರಿ ಬಿದ್ದಿದ್ದಾಳೆ. ಬಿದ್ದ ಹೊಡೆತಕ್ಕೆ ಯುವತಿಯ ಕಾಲು ಮುರಿದು ನಡೆಯದ ಪರಿಸ್ಥಿತಿ ಉಂಟಾಗಿತ್ತು. ಈ ವಿಚಾರವನ್ನು ಚಾರಣಿಗರು ಗಿರಿಗದ್ದೆಯ ಪುಷ್ಪಗಿರಿ ವನ್ಯಧಾಮದ ಶೆಡ್‌ನ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಅಧಿಕಾರಿಗಳು ಸುಬ್ರಹ್ಮಣ್ಯದ ಟ್ಯಾಕ್ಷಿ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಕುಸುಮಾಧರ ಅವರಿಗೆ ಕರೆ ಮಾಡಿ ಸಹಾಯ ಕೇಳಿದ್ದು ಅದರಂತೆ ಧರ್ಮಪಾಲ ಗೋಪಾಲ್, ಕೃಷ್ಣಕುಮಾರ್ ಶೆಟ್ಟಿ, ಜೀವನ್ ಗುತ್ತಿಗಾರು, ಸುಂದರ ಗೌಡ ಚೇರು ಎಂಬುವರ ಜತೆ ಸೇರಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸ್ಟ್ರೆಚರ್ ಪಡೆದು ಪರ್ವತಕ್ಕೆ ತೆರಳಿ ಯುವತಿಯನ್ನು ಅದರಲ್ಲಿ ಮಲಗಿಸಿ ಹೊತ್ತುಕೊಂಡು ಸುಬ್ರಹ್ಮಣ್ಯಕ್ಕೆ ತಂದಿದ್ದಾರೆ.
ಸುಬ್ರಹ್ಮಣಕ್ಕೆ ತಲುಪಿದ ಬಳಿಕ ತಂಡದಲ್ಲಿದ್ದ ಇತರೆ ಚಾರಣಿಗರು ಆಕೆಯನ್ನು ಚಾರಣಕ್ಕೆ ಬಂದಿದ್ದ ವ್ಯಾನ್‌ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ದಟ್ಟ ಕಾಡಿನಲ್ಲಿ ಕಾಲು ಮುರಿತ್ತಕ್ಕೆ ಒಳಗಾಗಿ ಒದ್ದಾಡುತ್ತಿದ್ದ ಯುವತಿಯನ್ನು ರಕ್ಷಿಸಿದ ಯುವಕರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.