Connect with us

    LATEST NEWS

    ಉಗ್ರರಿಂದ ಕರಾವಳಿ ರಕ್ಷಿಸಲು ಬಂದಿದೆ ಹೊಸ ಅಸ್ತ್ರ

    ಉಗ್ರರಿಂದ ಕರಾವಳಿ ರಕ್ಷಿಸಲು ಬಂದಿದೆ ಹೊಸ ಅಸ್ತ್ರ

    ಮಂಗಳೂರು ಅಕ್ಟೋಬರ್ 15 : ಉಗ್ರರ ಕರಿನೆರಳಿನಲ್ಲಿರುವ ಕರಾವಳಿಯ ಕಾವಲಿಗೆ ಹೊಸದೊಂದು ಅಸ್ತ್ರ ಸಿದ್ಧವಾಗಿದೆ. ಅರಬ್ಬೀ ಸಮುದ್ರದಲ್ಲಿ ಉಗ್ರ ಚಟುವಟಿಕೆಗಳಿಗೆ ಅವಕಾಶ ನೀಡದೆ, ಉಗ್ರರನ್ನು ಸದೆ ಬಡಿಯುವ ಅತ್ಯಾಧುನಿಕ ನೌಕೆಯೊಂದು ಇದೀಗ ಕರಾವಳಿ ತಟ ರಕ್ಷಣಾ ಪಡೆಗೆ ಸೇರ್ಪಡೆಯಾಗಿದೆ. ಹಲವು ವೈವಿಧ್ಯತೆಗಳನ್ನು ಒಳಗೊಂಡಿರುವ ಈ ನೌಕೆಯ ಕಣ್ಣು ತಪ್ಪಿಸಿ ಭಾರತದೊಳಗೆ ನುಗ್ಗೋದು ಇನ್ನು ಕನಸಿನ ಮಾತೇ ಆಗಿದೆ.

    ‘ ಐಸಿಜಿಎಸ್ ವರಾಹ’ ಹೆಸರಿನ ಈ ನೌಕೆ ಮುಂದಿನ ದಿನಗಳಲ್ಲಿ ಮಂಗಳೂರನ್ನೇ ಕೇಂದ್ರವನ್ನಾಗಿಸಿ ಕಾರ್ಯಾಚರಣೆ ನಡೆಸಲಿದೆ. ಚೆನ್ನೈನ ಪೋರ್ಟ್ ಟ್ರಸ್ಟ್‌ನಲ್ಲಿ ಸೆಪ್ಟಂಬರ್ 17 ರಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ನೌಕೆಯನ್ನು ದೇಶಕ್ಕೆ ಅರ್ಪಿಸಿದ್ದು ಮಂಗಳೂರಿನಲ್ಲಿ ಅಧಿಕೃತವಾಗಿ ಕೋಸ್ಟ್ ಗಾರ್ಡ್ ಗೆ ಸೇರ್ಪಡೆಯಾಗಿದೆ.

    ಮಂಗಳೂರಿನಲ್ಲಿರುವ ತಟರಕ್ಷಣಾ ಪಡೆಯ ಪ್ರಧಾನ ಕಚೇರಿ ಅಧೀನದಲ್ಲಿ ಈ ನೌಕೆ ಇರಲಿದ್ದು, ಪಶ್ಚಿಮ ಕರಾವಳಿಯಲ್ಲಿ ಭಯೋತ್ಪಾದನೆ ನಿಗ್ರಹ, ತೈಲ ಸೋರಿಕೆ ತಡೆ, ಸಮುದ್ರ ಪ್ರಯಾಣಿಕರು, ಹಡಗುಗಳ ರಕ್ಷಣೆ ಸೇರಿದಂತೆ ಬಹುಪಾತ್ರ ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದರಲ್ಲಿ ಎಚ್‌ಎಎಲ್ ನಿರ್ಮಿತ ಅಡ್ವಾನ್ಸಡ್ ಲೈಟ್ ಹೆಲಿಕಾಪ್ಟರ್ ಇರಲಿದ್ದು, ರಕ್ಷಣಾಕಾರ್ಯದಲ್ಲಿ ನೆರವಾಗಲು ಸಾಧ್ಯವಾಗಲಿದೆ.

    ಭಾರತೀಯ ಪುರಾಣಗಳಿಂದ ವಿಷ್ಣುವಿನ ಅವತಾರವಾದ ‘ವರಾಹ’ ಎಂಬ ಹೆಸರನ್ನು ಈ ನೌಕೆಗೆ ಇರಿಸಲಾಗಿದೆ. ಎಲ್‌ಎಂಡ್‌ಟಿ ಕಂಪನಿ ವರಾಹ ನೌಕೆಯನ್ನು ನಿರ್ಮಾಣ ಮಾಡಿದ್ದು ದೇಶೀಯವಾಗಿ ಅಭಿವೃದ್ಧಿ ಪಡಿಸಲಾದ ಅತ್ಯಾಧುನಿಕ ಸಂಪರ್ಕ, ಸಂವಹನ ಹಾಗೂ ನೇವಿಗೇಶನ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

    5000 ನಾಟಿಕನ್ ಮೈಲು ನಿರಂತರವಾಗಿ ಕ್ರಮಿಸುವ ಸಾಮರ್ಥವಿರುವ ಈ ನೌಕೆ 26 ದಿನಗಳ ಕಾಲ ಸಮುದ್ರದಲ್ಲೇ ಇರಬಲ್ಲದಾಗಿದೆ. ಅಲ್ಲದೆ ಅತ್ಯಂತ ಸುಸಜ್ಜಿತವಾದ ಅಗ್ನಿಶಾಮಕ ವ್ಯವಸ್ಥೆಯನ್ನು ಈ ನೌಕೆ ಹೊಂದಿದ್ದು, ಆಳ ಸಮುದ್ರದಲ್ಲಿ ಅಗ್ನಿ ದುರಂತಕ್ಕೀಡಾಗುವ ನೌಕೆಗಳನ್ನು ರಕ್ಷಿಸುವ ವ್ಯವಸ್ಥೆಯೂ ಇದರಲ್ಲಿದೆ. 150 ಮೀಟರ್ ವರೆಗೆ ನೀರು ಚಿಮ್ಮಿಸುವ ಸಾಮರ್ಥ್ಯ ಈ ನೌಕೆಯಲ್ಲಿರಲಿದೆ. ಅಪಾಯಕ್ಕೀಡಾದ ಯಾವುದೇ ನೌಕೆಗಳು ನಿಗದಿತ ಸಂದೇಶವನ್ನು ಕಳುಹಿಸಿದಲ್ಲಿ, ಅಪಾಯಕ್ಕೆ ಧಾವಿಸುವ ಇಲ್ಲವೇ ಹತ್ತಿರದಲ್ಲಿರುವ ಇತರ ತಟ ರಕ್ಷಣಾ ನೌಕೆಗಳಿಗೆ ಮಾಹಿತಿಯನ್ನು ರವಾನಿಸುವ ಅತ್ಯಾಧುನಿಕ ವ್ಯವಸ್ಥೆಯನ್ನೂ ಈ ನೌಕೆ ಹೊಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply