KARNATAKA
ನೇಣಿಗೆ ಕೊರಳು ಹಾಕಿ ಮನೆಯಲ್ಲಿ ಭಗತ್ ಸಿಂಗ್ ಪಾತ್ರದ ಅಭ್ಯಾಸ – ಬಾಲಕನ ದುರ್ಮರಣ

ಚಿತ್ರದುರ್ಗ ಅಕ್ಟೋಬರ್ 30: ಭಗತ್ ಸಿಂಗ್ ನಾಟಕದಲ್ಲಿ ಬರುವ ನೇಣಿನ ಸೀನ್ ಗಾಗಿ ಬಾಲಕನೊಬ್ಬ ಅಭ್ಯಾಸ ಮಾಡುತ್ತಿರವಾಗ ನಿಜವಾಗಿಯೂ ಬಾಲಕ ನೇಣಿಗೀಡಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮೃತ ಬಾಲಕನನ್ನು ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ಸಂಜಯ್ ಗೌಡ(12) ಎಂದು ಗುರುತಿಸಲಾಗಿದೆ.
ಎಸ್‌ಎಲ್‌ವಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಸಂಜಯ್, ಭಗತ್ ಸಿಂಗ್ ಪಾತ್ರದಲ್ಲಿ ಅಭಿನಯಿಸಲು ಭಾರೀ ಸಿದ್ಧತೆ ನಡೆಸುತ್ತಿದ್ದ, ಮನೆಗೆ ಬಂದ ಬಳಿಕವೂ ಶನಿವಾರ ರಿಹರ್ಸಲ್‌ಗೆ ಮುಂದಾಗಿದ್ದ ಸಂಜಯ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೂಲಿನ ಹಗ್ಗ ಬಿಗಿದು ಮಂಚದ ಮೇಲೆ ನಿಂತಿದ್ದಾನೆ. ಬಳಿಕ ತನ್ನ ಮುಖಕ್ಕೆ ಉಲ್ಲನ್ ಟೋಪಿ ಹಾಕಿಕೊಂಡು ಮಂಚದಿಂದ ಜಿಗಿದಿದ್ದಾನೆ. ಜಿಗಿದ ರಭಸಕ್ಕೆ ಸ್ಥಳದಲ್ಲಿಯೇ ಸಂಜಯ್ ಸಾವನ್ನಪ್ಪಿದ್ದಾನೆ.

ನಂತರ ಮನೆಗೆ ಬಂದ ಪೋಷಕರು ಮಗ ಫ್ಯಾನಿನಲ್ಲಿ ನೇತಾಡುತ್ತಿರುವುದನ್ನು ಕಂಡು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟೋತ್ತಿಗಾಗಲೇ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದೀಗ ಈ ಸಂಬಂಧ ಚಿತ್ರದುರ್ಗ ಬಡಾವಣೆ ಠಾಣೆಗೆ ಸಂಜಯ್ ಪೋಷಕರು ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.