KARNATAKA
ಚೀನಾ ಆ್ಯಪ್ ನ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾದ ವಿಧ್ಯಾರ್ಥಿ
ಬೆಂಗಳೂರು ಜುಲೈ 11: ಚೀನಾ ಆ್ಯಪ್ ಮೂಲಕ ಸಾಲ ಪಡೆದಿದ್ದ ವಿದ್ಯಾರ್ಥಿಯೊಬ್ಬ ಅವರ ಕಾಟ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಚ್ಎಂಟಿ ಬಡಾವಣೆಯಲ್ಲಿ ನಡೆದಿದೆ. ಮೃತ ಯುವಕನನ್ನು ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನ ವಿಧ್ಯಾರ್ಥಿ ತೇಜಸ್ (22) ಎಂದು ಗುರುತಿಸಲಾಗಿದೆ.
ಮೆಕಾನಿಕಲ್ ಎಂಜಿನಿಯರಿಂಗ್ ನಲ್ಲಿ ‘ಆರನೇ ಸೆಮಿಸ್ಟಾರ್ ಓದುತ್ತಿದ್ದ ತೇಜಸ್ ಕಾಲೇಜಿಗೆ ಟಾಪರ್ ಆಗಿದ್ದ. ತನ್ನ ಸ್ನೇಹಿತ ಮಹೇಶ್‌ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಮೂಲಕ ಸಾಲ ಪಡೆದಿದ್ದ. ಆದರೆ, ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಇಎಂಐ ಕಟ್ಟಿರಲಿಲ್ಲ. ಸಾಲ ನೀಡಿದವರು ವಿಪರೀತ ಕಿರುಕುಳ ನೀಡುತ್ತಿದ್ದರಂತೆ. ಹಾಗಾಗಿ, ಡೆತ್ ನೋಟ್ ಬರೆದಿಟ್ಟು ಮಂಗಳವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸಾವಿಗೂ ಮುನ್ನ ಡೆತ್‌ನೋಟ್ ಬರೆದಿದ್ದಾನೆ. ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿ ಇಲ್ಲ. ಮಾಡಿರುವ ಸಾಲ ತೀರಿಸಲು ಆಗುವುದಿಲ್ಲ. ಇದು ನನ್ನ ಕೊನೆ ತೀರ್ಮಾನ’ ಎಂದು ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಜಾಲಹಳ್ಳಿ ಪೊಲೀಸ್ ಠಾಣೆಗೆ ತೇಜಸ್ ಪೋಷಕರು ದೂರು ನೀಡಿದ್ದಾರೆ.