LATEST NEWS
ವಾಹನ ತೆರಿಗೆ ಪಾವತಿಸದಿದ್ದಲ್ಲಿ ಕಠಿಣ ಕ್ರಮ – ಆರ್.ಎಂ ವರ್ಣೇಕರ್ ಸೂಚನೆ
ವಾಹನ ತೆರಿಗೆ ಪಾವತಿಸದಿದ್ದಲ್ಲಿ ಕಠಿಣ ಕ್ರಮ – ಆರ್.ಎಂ ವರ್ಣೇಕರ್ ಸೂಚನೆ
ಉಡುಪಿ, ಮಾರ್ಚ್ 5 : ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಗೆ 2019 ನೇ ಸಾಲಿಗೆ 140.21 ಕೋಟಿ ರಾಜಸ್ವ ಸಂಗ್ರಹ ಗುರಿ ಇದ್ದು, ಪ್ರಸ್ತುತ ಫೆಬ್ರವರಿ ಅಂತ್ಯದ ವೇಳೆಗೆ 121 ಕೋಟಿ ರಾಜಸ್ವ ಸಂಗ್ರಹಿಸಿದ್ದು, ಮಾರ್ಚ್ ಮಾಹೆಯಲ್ಲಿ ನಿಗಧಿತ ಗುರಿ ಸಾಧಿಸಬೇಕಿದ್ದು, ವಾಹನ ಮಾಲೀಕರು ತಮ್ಮ ವಾಹನದ ತೆರಿಗೆ ಬಾಕಿ ಇದ್ದಲ್ಲಿ ಕೂಡಲೇ ಪಾವತಿಸುವಂತೆ ಇಲ್ಲವಾದಲ್ಲಿ ಮೋಟಾರು ವಾಹನ ಕಾಯಿದೆ ಮತ್ತು ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಸಾರಿಗೆ ಆಯುಕ್ತ ಹಾಗೂ ಉಡುಪಿ ಜಿಲ್ಲಾ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ ವರ್ಣೇಕರ್ ತಿಳಿಸಿದ್ದಾರೆ.
ಅವರು ಮಂಗಳವಾರ RTO ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾಹಿತಿ ನೀಡಿದರು. ಮಾರ್ಚ್ ಮಾಹೆಯಲ್ಲಿ ನಿಗದಿತ ರಾಜಸ್ವ ಸಂಗ್ರಹ ಗುರಿ ಸಾಧಿಸಬೇಕಿದ್ದು, ವಾಹನ ತೆರಿಗೆ ಪಾವತಿಸದೇ ಇರುವವರ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವುದು, ತೆರಿಗೆ ಬಾಕಿ ಇರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಪರವಾನಗಿ ನಿಬಂದನೆಯನ್ನು ಉಲ್ಲಂಘಿಸಿ ಸಂಚರಿಸುವ ವಾಹನಗಳ ಮೇಲೆ ಪ್ರಕರಣಗಳನ್ನು ದಾಖಲಿಸಿ ದಂಡ ಮತ್ತು ತೆರಿಗೆಯನ್ನು ವಸೂಲಿ ಮಾಡಲಾಗುವುದು ಎಂದ ಸಾರಿಗೆ ಅಧಿಕಾರಿ, ಅಲ್ಲದೇ ವಾಹನಗಳ ವ್ಯಾಪಕ ತಪಾಸಣೆ ಸಹ ನಡೆಸಲಾಗುವುದು ಆದ್ದರಿಂದ ವಾಹನ ಮಾಲೀಕರು ಕೂಡಲೇ ಬಾಕಿ ಇರುವ ತೆರಿಗೆಯನ್ನು ಪಾವತಿಸುವಂತೆ ತಿಳಿಸಿದರು.
ವಾಹನಗಳಿಗೆ ಚಾರ್ಜ್ ಶೀಟ್ ಹಾಕುವ ಮೂಲಕ ತೆರಿಗೆ ಸಂಗ್ರಹಕ್ಕೆ ಇಲಾಖೆ ಮುಂದಾಗಿದ್ದು, ಈಗಾಗಲೇ ನ್ಯಾಯಾಲಯದಲ್ಲಿ 900 ವಾಹನಗಳಿಗೆ ಚಾರ್ಜ್ ಶೀಟ್ ಹಾಕಲಾಗಿದೆ. ತೆರಿಗೆ ಬಾಕಿ ಇರುವ ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದ್ದು, 2 ತಿಂಗಳಲ್ಲಿ 8 ಬಸ್, 1 ಮೋಟಾರ್ ಕ್ಯಾಬ್, 35 ಲಾರಿ, ಆಂಬುಲೆನ್ಸ್, ಶಾಲಾ ವಾಹನ ಸೇರಿದಂತೆ ಒಟ್ಟು 250 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ.
ಪರವಾನಿಗೆ ನಿಬಂಧನೆಗಳನ್ನು ಉಲ್ಲಂಘಿಸಿ ಸಂಚರಿಸುವ ವಾಹನಗಳ ಮೇಲೆ ಪ್ರಕರಣಗಳನ್ನು ದಾಖಲಿಸಿ ದಂಡ ಹಾಗೂ ತೆರಿಗೆಯನ್ನು ವಸೂಲಿ ಮಾಡಲಾಗುತ್ತಿದ್ದು, ಜನವರಿ ತಿಂಗಳಲ್ಲಿ 181 ಪ್ರಕರಣಗಳು ದಾಖಲಾಗಿದ್ದು, 42 ವಾಹನ ಮುಟ್ಟುಗೋಲು ಹಾಕಿ, ಒಟ್ಟು ರೂ. 18,56,525 ತೆರಿಗೆ ಸಂಗ್ರಹ ಮತ್ತು ರೂ. 5,79, 500 ದಂಡ ವಸೂಲು ಮಾಡಲಾಗಿದೆ ಎಂದರು.
ಉಡುಪಿಯಲ್ಲಿ 4,20,000 ವಾಹನಗಳು ನೊಂದಾವಣೆಯಾಗಿದ್ದು, ಇವುಗಳಲ್ಲಿ 1,00,500 ಸಾರಿಗೆ ವಾಹನಗಳು ಓಡಾಟ ನಡೆಸುತ್ತಿವೆ. ಯಾವುದೇ ವಾಹನಗಳು ನೊಂದಾಯಿತ ರಾಜ್ಯ ಹೊರತು ಪಡಿಸಿ ಇತರ ರಾಜ್ಯದಲ್ಲಿ 30 ದಿನಗಳಿಗಿಂತ ಅಧಿಕ ದಿನ ಸಂಚರಿಸಿದರೆ ಆ ವಾಹನಗಳು ಆ ರಾಜ್ಯದಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. ಯಾವುದೇ ಬಸ್ ಗಳು ನಿಗದಿತ ಮಾರ್ಗ ಬದಲಾಯಿಸಿ ಸಂಚರಿಸಿದರೆ ಹಾಗೂ ಯಾವುದೇ ಗೂಡ್ಸ್ ವಾಹನಗಳು ನಿಗದಿತ ಸಾಮರ್ಥ್ಯಕ್ಕಿಂತ ಅಧಿಕ ಸರಕನ್ನು ಸಾಗಾಟ ಮಾಡಿದರೆ ಅದು ಪರವಾನಿಗೆ ಉಲ್ಲಂಘನೆ ಆಗಲಿದೆ ಎಂದರು.
ಕಳೆದ ಭಾರಿ ಜಿಲ್ಲೆಯಲ್ಲಿ 136.5 ಕೋಟಿ ರೂ. ರಾಜಸ್ವ ಸಂಗ್ರವಾಗಿದ್ದು, ಗುರಿ ಮೀರಿ ಸಾಧನೆ ಮಾಡಲಾಗಿತ್ತು ಎಂದು ವರ್ಣೇಕರ್ ಹೇಳಿದರು.