KARNATAKA
ಶಿವಮೊಗ್ಗ – ಬಜರಂಗದಳದ ಕಾರ್ಯಕರ್ತನ ಅಂತಿಮ ಯಾತ್ರೆ ವೇಳೆ ಕಲ್ಲು ತೂರಾಟ
ಶಿವಮೊಗ್ಗ :ಬಜರಂಗ ದಳದ ಕಾರ್ಯಕರ್ತ ಬೀಕರ ಹತ್ಯೆ ಬಳಿಕ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ಮುಂದುವರೆದಿದ್ದು, ಮೆಗ್ಗಾನ್ ಆಸ್ಪತ್ರೆಯಿಂದ ಹರ್ಷನ ಮನೆ ಬಳಿಗೆ ಮೃತದೇಹ ತರಲಾಗಿದ್ದು, ಅಂತಿಮ ಯಾತ್ರೆ ಮೆರವಣಿಗೆ ವೇಳೆ ಉದ್ರಿಕ್ತರ ಗುಂಪು ಬೈಕ್ಗೆ ಬೆಂಕಿ ಹಚ್ಚಿ, ಕಾರುಗಳ ಗಾಜನ್ನು ಪುಡಿಪುಡಿ ಮಾಡಿದೆ.
ಹರ್ಷ ಕೊಲೆಯಾದ ಬಳಿಕ ನಗರದ ಸೀಗೆಹಟ್ಟಿ, ಕಲ್ಲಪ್ಪನ ಕೇರಿ, ರವಿವರ್ಮ ಬೀದಿ, ಕ್ಲಾರ್ಕ್ ಪೇಟೆ ಒಳಗೊಂಡಂತೆ ಅರ್ಧ ಹಳೇ ಶಿವಮೊಗ್ಗ ಭಾಗ ಬೂದಿಮುಚ್ಚಿದ ಕೆಂಡಂತಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯಿಂದ ಸೀಗೆಹಟ್ಟಿಯ ನಿವಾಸಕ್ಕೆ ಸಾಗಿಸಲಾಗಿದೆ.
ಕಲ್ಲು ತೂರಾಟದಿಂದ ಪತ್ರಕರ್ತರೂ ಸೇರಿ ಹಲವರಿಗೆ ಗಾಯಗಳಾಗಿವೆ. ಕೆಲವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಜಾದ್ ನಗರ, ಬಿ.ಬಿ.ರಸ್ತೆ, ಸೀಗೆಹಟ್ಟಿ, ಆರ್‌ಎಂಎಲ್ ನಗರಗಳಲ್ಲಿ ಕಲ್ಲು ತೂರಾಟ ನಡೆದಿದೆ. ಗುಂಪು ಚದುರಿಸಲು ಪೊಲೀಸರು ಹರ ಸಾಹಸ ನಡೆಸುತ್ತಿದ್ದಾರೆ. ಒಂದು ಭಾಗದಲ್ಲಿ ಪರಿಸ್ಥಿತಿ ನಿಯಂತ್ರಿಸುವಷ್ಟರಲ್ಲಿ ಮತ್ತೊಂದು ಭಾಗಕ್ಕೆ ಗಲಭೆ ಹಬ್ಬುತ್ತಿದೆ.
ಬಜರಂಗದಳ, ವಿಶ್ವಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೆಗ್ಗಾನ್ ಶವಾಗಾರದ ಮುಂದೆ ಜಮಾಯಿಸಿದ್ದಾರೆ. ಪಾರ್ಥಿವ ಶರೀರದ ಮೆರವಣಿಗೆಗೆ ಪಟ್ಟು ಹಿಡಿದರು. ಪೊಲೀಸರು ಅನುಮತಿ ನೀಡದ ಕಾರಣ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.