KARNATAKA
ಗಲಭೆಕೋರರ ವಿರುದ್ದ ಕ್ರಮಕ್ಕೆ ಪೊಲೀಸರಿಗೆ ಸಂಪೂರ್ಣ ಅಧಿಕಾರ – ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಉಡುಪಿ ಅಗಸ್ಟ್ 12: ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ತೀವ್ರ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿ ಅದು ಹಿಂಸಾರೂಪಕ್ಕೆ ತಿರುಗಿ ಇಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಉಡುಪಿಯಲ್ಲಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.
ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಆಪ್ತ ಸೋಷಿಯಲ್ ಮೀಡಿಯಾದಲ್ಲಿ ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಅಲ್ಪಸಂಖ್ಯಾತರ ಗುಂಪು ಕಳೆದ ರಾತ್ರಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆ ಮೇಲೆ ಏಕಾಏಕಿ ದಾಳಿ ನಡೆಸಿ ತೀವ್ರ ದಾಂಧಲೆ ನಡೆಸಿತ್ತು. ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸ್ ವಾಹನದ ಮೇಲೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ರಾಜ್ಯದಲ್ಲಿ ಮತ್ತೊಂದು ಗುಂಪು ಗಲಭೆಗೆ ಸಾಕ್ಷಿಯಾಯಿತು.
ಗಲಭೆ ಕುರಿತಂತೆ ಮಾಹಿತಿ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಯಾವುದೇ ವಿಚಾರವಿದ್ದರೂ ಅದನ್ನು ಕಾನೂನಿನನ್ವಯ ಬಗೆಹರಿಸಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಂಡು ಪುಂಡಾಟಿಕೆ ಪ್ರದರ್ಶಿಸುವುದು ಹಾಗೂ ಬೆಂಕಿ ಹಚ್ಚುವುದು ಸರಿಯಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೆ.ಜಿ.ಹಳ್ಳಿಯಲ್ಲಿ ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದೇನೆ’ ಎಂದರು. ‘ಘಟನಾ ಸ್ಥಳದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಂತೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಗರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ಹೇಳಿದ್ದೇನೆ’ ಎಂದೂ ಹೇಳಿದರು.