LATEST NEWS
ರಾಜ್ಯ ಸರಕಾರದ ಅಕಾಡೆಮಿಗಳ ನೇಮಕಾತಿ ಕರಾವಳಿಯಲ್ಲಿ ಅಸಮಧಾನದ ಹೊಗೆ
ರಾಜ್ಯ ಸರಕಾರದ ಅಕಾಡೆಮಿಗಳ ನೇಮಕಾತಿ ಕರಾವಳಿಯಲ್ಲಿ ಅಸಮಧಾನದ ಹೊಗೆ
ಮಂಗಳೂರು ಅಕ್ಟೋಬರ್ 17: ರಾಜ್ಯ ಸರಕಾರ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ. ಅವಸರದಲ್ಲಿ ಪಟ್ಟಿ ಬಿಡುಗಡೆ ಮಾಡಿರುವ ಸರಕಾರದ ಕ್ರಮಕ್ಕೆ ಅಕಾಡೆಮಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಲ್ಲಿ ಆಕ್ರೋಶ ಮಡುಗಟ್ಟಿದೆ.
ತುಳು ಅಕಾಡೆಮಿಗೆ ಕೇಂದ್ರ ಸರಕಾರಿ ನೌಕರರೊಬ್ಬರನ್ನು ಅಧ್ಯಕ್ಷರಾಗಿ ನೇಮಿಸಿದ್ದು ಅಚ್ಚರಿಯ ನಡೆಗಳಲ್ಲೊಂದು. ತುಳು ಅಕಾಡೆಮಿಗೆ ಜನಪದ ಕಲಾವಿದ ದಯಾನಂದ ಕತ್ತಲಸಾರ್ ಅವರನ್ನು ಅಧ್ಯಕ್ಷರಾಗಿ ರಾಜ್ಯ ಸರಕಾರ ನೇಮಿಸಿದೆ. ಆದರೆ, ಈ ಹುದ್ದೆಯ ಬಗ್ಗೆ ಪ್ರಬಲ ಆಕಾಂಕ್ಷಿಯಾಗಿದ್ದ ತುಳು ಚಲನಚಿತ್ರ ಕಲಾವಿದರ ಒಕ್ಕೂಟದ ಪಮ್ಮಿ ಕೊಡಿಯಾಲ್ ಬೈಲ್, ತನಗೆ ಹುದ್ದೆ ಸಿಗದಿರುವ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ಹೆಸರೇ ಫೈನಲ್ ಆಗಿತ್ತು. ಯಾರದ್ದೋ ಕೈವಾಡದಲ್ಲಿ ನನ್ನ ಹೆಸರನ್ನು ತಪ್ಪಿಸಲಾಗಿದೆ. ಅಲ್ಲದೆ, ಪೋಸ್ಟಲ್ ಹುದ್ದೆಯಲ್ಲಿರುವ ದಯಾನಂದ ಕತ್ತಲಸಾರ್ ಅವರನ್ನು ಹೇಗೆ ನೇಮಕ ಮಾಡಿದ್ರೋ ಗೊತ್ತಿಲ್ಲ ಅಂತಾ ಪಮ್ಮಿ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.
ಅಕಾಡೆಮಿ ಅಧ್ಯಕ್ಷರಾಗುವವರು ಬೇರಾವುದೇ ಸರಕಾರಿ ಹುದ್ದೆಗಳಲ್ಲಿ ಇರುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ ದಯಾನಂದ , ಅಧ್ಯಕ್ಷರಾಗಿ ಮುಂದುವರಿಯಬೇಕಾದಲ್ಲಿ ತಮ್ಮ ಕೇಂದ್ರ ಸರಕಾರಕ್ಕೆ ಒಳಪಟ್ಟ ಪರ್ಮನೆಂಟ್ ಸರಕಾರಿ ಹುದ್ದೆಯನ್ನು ತ್ಯಜಿಸಬೇಕಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ವೈ.ಎನ್ ಶೆಟ್ಟಿ ಕಳೆದ ಬಾರಿಯೂ ತುಳು ಅಕಾಡೆಮಿ ಸದಸ್ಯರಾಗಿದ್ದವರು. ಈ ಬಾರಿ ಅಕಾಡೆಮಿ ಅಧ್ಯಕ್ಷರಾಗುತ್ತಾರೆಂಬ ಮಾತು ಕೇಳಿಬಂದಿತ್ತು. ಉಡುಪಿ ಜಿಲ್ಲಾ ಬಿಜೆಪಿಯವರು ತುಳು ಸಂಶೋಧಕ, ಲೇಖಕ ವೈ.ಎನ್ ಶೆಟ್ಟಿಯವರನ್ನೇ ಅಧ್ಯಕ್ಷರನ್ನಾಗಿ ಮಾಡುವಂತೆ ಶಿಫಾರಸು ಮಾಡಿದ್ದರು. ಆದರೆ, ಮತ್ತೆ ಅಕಾಡೆಮಿ ಸದಸ್ಯರಾಗಿ ಅವರನ್ನು ನೇಮಿಸಿಕೊಳ್ಳಲಾಗಿದೆ. ಸದಸ್ಯರಾದವರ ಪೈಕಿ ತುಳು ಭಾಷೆ, ಸಾಹಿತ್ಯ, ಜನಪದ ವಿಚಾರದಲ್ಲಿ ಹೆಚ್ಚು ದುಡಿದಿರುವ ವೈ.ಎನ್.ಶೆಟ್ಟಿ ಅಕಾಡೆಮಿ ಅಧ್ಯಕ್ಷತೆಗೆ ಅರ್ಹರೇ ಆಗಿದ್ದರು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ನಾಯಕ ಮಣಿಗಳ ಬಕೆಟ್ ರಾಜಕೀಯದಿಂದಾಗಿ ರೇಸಿನಲ್ಲೇ ಇಲ್ಲದ ವ್ಯಕ್ತಿಯನ್ನು ಅಧ್ಯಕ್ಷರಾಗಿ ಮಾಡಿದ್ದಾರೆಂಬ ಮಾತು ತುಳು ಸಾಹಿತ್ಯ ವಲಯದಲ್ಲಿ ಕೇಳಿಬರುತ್ತಿದೆ. ಒಮ್ಮೆ ಅಕಾಡೆಮಿ ಸದಸ್ಯರಾದವರು ಮುಂದಿನ ಅವಧಿಯಲ್ಲೂ ಸದಸ್ಯರಾಗುವಂತಿಲ್ಲ ಎಂಬ ನಿಯಮಗಳಿವೆ. ಆದರೆ, ಈ ಸೂತ್ರಗಳೆಲ್ಲ ಈಗೀಗ ಗಾಳಿಗೆ ತೂರಲ್ಪಡುತ್ತಿವೆ.
ಇನ್ನು ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಮತ್ತೆ ರಹೀಂ ಉಚ್ಚಿಲರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಹಿಂದೆ ಬಿಜೆಪಿ ಸರಕಾರ ಇದ್ದಾಗಲೂ ರಹೀಂ ಉಚ್ಚಿಲ ಬ್ಯಾರಿ ಅಕಾಡೆಮಿ ಅಧ್ಯಕ್ಷರಾಗಿದ್ದರು. ಈ ಬಾರಿಯೂ ಅವರನ್ನೇ ಮರು ಆಯ್ಕೆ ಮಾಡಿದ್ದು, ಕರಾವಳಿಯಲ್ಲಿ ಮುಸ್ಲಿಂ ಸಾಹಿತ್ಯಾಸಕ್ತರೇ ಇಲ್ಲವೇನೋ ಅನ್ನುವ ಮಾತು ಕೇಳುವಂತಾಗಿದೆ. ಬ್ಯಾರಿ ಅಕಾಡೆಮಿ ಸದಸ್ಯರಾಗಿಯೂ ಮೂವರು ಮುಸ್ಲಿಂ, ಇಬ್ಬರು ಹಿಂದು ಮಹಿಳೆಯರನ್ನು ನೇಮಕ ಮಾಡಲಾಗಿದೆ. ಬ್ಯಾರಿ ಸಾಹಿತ್ಯದಲ್ಲಿ ದುಡಿದಿರುವ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಬಹುದಿತ್ತು. ಹೀಗಾಗಿ, ಇಲ್ಲಿ ಬಿಜೆಪಿಯವರು ಆಯ್ಕೆ ಮಾಡುವಲ್ಲೇ ಎಡವಿದಂತಿದ್ದಾರೆ. 13 ಮಂದಿ ಸದಸ್ಯರು ಇರಬೇಕಾದ ಜಾಗದಲ್ಲಿ ಕೇವಲ ಏಳು ಮಂದಿಯನ್ನು ನೇಮಿಸಿದ್ದಾರೆ. ಅದರಲ್ಲೂ ಬ್ಯಾರಿ ಅಕಾಡೆಮಿಗೆ ಭಾಷೆಯೇ ಗೊತ್ತಿಲ್ಲದ ಕಾರ್ಯಕರ್ತರನ್ನು ತುಂಬಿಸಿದ್ದು ನಗೆಪಾಟಲಿಗೀಡು ಮಾಡಿದೆ. ಸಂಸದ ನಳಿನ್ ಕುಮಾರ್ ರಾಜ್ಯಾಧ್ಯಕ್ಷರಾದ ಸಂದರ್ಭದಲ್ಲಿ ಮಂಗಳೂರಿನ ಮುಸ್ಲಿಂ ಗಣ್ಯರು ಸೇರಿ ಸನ್ಮಾನ ಸಮಾರಂಭ ಮಾಡಿದ್ದರು. ಸಮಾರಂಭದಲ್ಲಿ ಮುಸ್ಲಿಮರನ್ನು ಮೆಚ್ಚಿಸುವ ಮಾತನ್ನೂ ನಳಿನ್ ಆಡಿದ್ದರು. ಇದೀಗ ಅಕಾಡೆಮಿಗೆ ಭರ್ತಿ ಮಾಡುವಾಗ ಬ್ಯಾರಿ ಭಾಷೆ ಮಾತನಾಡುವ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅರ್ಹರ ಆಯ್ಕೆ ಮಾಡುವಲ್ಲಿ ಆಯ್ಕೆಗಾರರು ಸೋತಿದ್ದಾರೆ. ಅಧ್ಯಕ್ಷರು ಸೇರಿದಂತೆ ಆಯ್ಕೆಯಾದ ನಾಲ್ವರಲ್ಲಿ ಮಂಗಳೂರಿನ ಉಳ್ಳಾಲಕ್ಕೆ ಸೀಮಿತ ಆಗಿರುವವರು ಅನ್ನುವುದು ವಿಶೇಷ.