Connect with us

JYOTHISHYA

ಮಗು ಹುಟ್ಟುವ ಮುನ್ನ ಗರ್ಭಾವಸ್ಥೆಯಲ್ಲಿ ಯಾವ ಮನಃಸ್ಥಿತಿಯಲ್ಲಿ ಇರುತ್ತದೆ: ಭಾಗವತದ ಈ ನಿಗೂಢ ರಹಸ್ಯ 

ಲೇಖಕರು: ಗಜೇಂದ್ರ ಜೋಷಿ, ಜಾತಕ ವಿಮರ್ಷಕರು ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಆರಾಧಕರು:

ಮಗು ಹುಟ್ಟುವ ಮುನ್ನ ಗರ್ಭಾವಸ್ಥೆಯಲ್ಲಿ ಯಾವ ಮನಃಸ್ಥಿತಿಯಲ್ಲಿ ಇರುತ್ತದೆ: ಭಾಗವತದ ಈ ನಿಗೂಢ ರಹಸ್ಯ  ಕದರ್ಮ ಮಹರ್ಷಿಗಳ ಮಗನಾದ, ಸಾಕ್ಷಾತ್ ವಿಷ್ಣು ಸಂಭೂತನಾದ ಕಪಿಲ ಮಹರ್ಷಿಯು ತನ್ನ ತಾಯಿಯಾದ ದೇವಹೂತಿಗೆ ಗರ್ಭದ ಬೆಳವಣಿಗೆಯ ಬಗ್ಗೆ ತಿಳಿಸಿದರು.

ಆಹಾರದ ಮೂಲಕ ಪುರುಷನ ದೇಹದಲ್ಲಿ ವೀರ್ಯವು ಉತ್ಪತ್ತಿಯಾಗುತ್ತದೆ. ಸ್ತ್ರೀ-ಪುರುಷರ ಸಮಾಗಮದ ಬಳಿಕ ವೀರ್ಯವು ಸ್ತ್ರೀಯ ಗರ್ಭವನ್ನು ಸೇರಿಕೊಳ್ಳುತ್ತದೆ. ಜೀವಿಯು ಪಾಪ ಪುಣ್ಯಗಳನ್ನು ಸ್ವರ್ಗ ಮತ್ತು ನರಕದಲ್ಲಿ ಅನುಭವಿಸಿದರೂ ದೇಹ ಸಂಬಂಧವನ್ನುಂಟುಮಾಡುವ ಕರ್ಮಗಳು ಸದಾ ಉಳಿದಿರುತ್ತದೆ. ಅದು ಸ್ತ್ರೀ ಯೋನಿಯನ್ನು ಪ್ರವೇಶಿಸಿ ಸ್ತ್ರೀಯ ರಜಸ್ಸಿನಲ್ಲಿ(ಅಂಡಾಶಯ) ಕಲೆತು ಕಲಲ’ ರೂಪವನ್ನು ತಾಳುತ್ತದೆ. ಇದು ರಾತ್ರಿಗಳಲ್ಲಿ ಪಕ್ವವಾಗಿ ಗುಳ್ಳೆಯ ಆಕಾರವನ್ನು ಹೊಂದುತ್ತದೆ. ಇದನ್ನು ಬುದ್ಭುದ ರೂಪವೆನ್ನುತ್ತಾರೆ.

ADVERTISEMENT

ಹತ್ತು ದಿನಗಳ ಬಳಿಕ ಬೋರೆಯ ಹಣ್ಣಿನ ರೂಪವನ್ನು ಪಡೆದು ಕೆಲವು ದಿನಗಳಲ್ಲಿ ಮಾಂಸಖಂಡವಾಗಿ ಏರ್ಪಟ್ಟು ಮೊಟ್ಟೆಯ ಆಕಾರವನ್ನು ಪಡೆಯುತ್ತದೆ. ಒಂದು ತಿಂಗಳ ಒಳಗೆ ಆ ಮಾಂಸಪಿಂಡದಲ್ಲಿಯೇ ತಲೆಯ ರಚನೆಯಾಗುತ್ತದೆ. ಎರಡು ತಿಂಗಳಲ್ಲಿ ಕೈ-ಕಾಲು ಮುಂತಾದ ಅಂಗಗಳ ಉತ್ಪತ್ತಿಯಾಗುತ್ತದೆ. ಮೂರನೇ ತಿಂಗಳಲ್ಲಿ ಉಗುರು, ಮೈಕೂದಲು, ಎಲುಬು, ಚರ್ಮ, ಸ್ತ್ರೀ-ಪುರುಷರನ್ನು ಸೂಚಿಸುವ ಲಿಂಗಗಳು ಮತ್ತು ನವದ್ವಾರಗಳು ರಚನೆಯಾಗುತ್ತದೆ. ನಾಲ್ಕನೆಯ ತಿಂಗಳಲ್ಲಿ ಮಾಂಸ ಮತ್ತು ಸಪ್ತಧಾತುಗಳು ಹುಟ್ಟಿಕೊಳ್ಳುತ್ತದೆ. ಐದನೆಯ ತಿಂಗಳಲ್ಲಿ ಹಸಿವು, ಬಾಯಾರಿಕೆ ಉಂಟಾಗುತ್ತದೆ.

ಆರನೆಯ ತಿಂಗಳಲ್ಲಿ ಗರ್ಭದ ಚೀಲದೊಳಗಡೆ ಬಿಗಿಯಾಗಿ ಬಿಗಿಯಾಗಿ ಆವರಿಸಲ್ಪಟ್ಟು, ಶಿಶುವು ಕೋಶದ ಬಲಭಾಗಕ್ಕೆ ತಿರುಗುತ್ತದೆ. ಆಗ ಗರ್ಭವತಿಯು ಉಣ್ಣುವ, ಕುಡಿಯುವ ಆಹಾರ ಪಾನೀಯಗಳಿಂದ ಎಲ್ಲಾ ಧಾತುಗಳ ಪೋಷಣೆಗೊಳ್ಳುತ್ತದೆ. ಹಾಗೆಯೇ ಕ್ರಿಮಿಕೀಟಗಳು ಸೃಜಿಸಲ್ಪಡುವ ಮಲಮೂತ್ರ ಸ್ಥಾನದಲ್ಲಿರುತ್ತದೆ.

ಆ ಸಮಯದಲ್ಲಿ ಗರ್ಭವಾಸವಾಗಿರುವ ಶಿಶುವನ್ನು ಅನೇಕ ಕ್ರಿಮಿಕೀಟಗಳು ಕಚ್ಚುತ್ತದೆ. ಸುಮದಂತೆ ಕೋಮಲವಾಗಿರುವ ಚರ್ಮವನ್ನು ಕಚ್ಚುವಾಗ ಮಗುವಿಗೆ ನೋವಾಗುತ್ತದೆ. ಆ ಘಳಿಗೆಯಲ್ಲಿ ಮಗುವು ನೋವನ್ನು ತಾಳಲಾರದೆ ಮೂರ್ಛೆ ಹೋಗುತ್ತದೆ. ಕೆಲವೊಮ್ಮೆ ಚೇತರಿಸಿಕೊಳ್ಳುತ್ತದೆ. ಅಮ್ಮನ ರುಚಿಗನುಸಾರವಾಗಗಿ ಸೇವಿಸಲ್ಪಡುವ ಕಹಿ, ಖಾರ, ಹುಳಿ, ಉಪ್ಪು ಮೊದಲಾದ ಪದಾರ್ಥಗಳಿಂದ ಅದು ನರಳಬೇಕಾಗುತ್ತದೆ. ಈ ಹಿಂಸೆಯು ಅಸಹನೀಯವಾಗಿದ್ದರೂ ಗರ್ಭಸ್ಥ ಮಗುವಿನ ರೋದನವನ್ನು ಕೇಳುವವರು ಯಾರು? ಆಗ ಶಿಶುವಿಗೆ ಜನ್ಮಾಂತರದಲ್ಲಿ ಮಾಡಿದ ದುಷ್ಕರ್ಮಗಳ ಅರಿವು ಉಂಟಾಗಿ ಪಶ್ಚಾತಾಪದಿಂದ ನಿಟ್ಟುಸಿರು ಬಿಡುತ್ತದೆ. ಹಾಗಾಗಿ ಆ ವೇಳೆಯಲ್ಲಿ ನೆಮ್ಮದಿ ಇರುವುದಿಲ್ಲ.

ADVERTISEMENT

ಏಳನೆಯ ತಿಂಗಳಲ್ಲಿ ಜ್ಞಾನಶಕ್ತಿಯು ಉಂಟಾಗುತ್ತದೆ. ತಾನು ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪಕ್ಕಾಗಿ ಕ್ಷಮಿಸಲು ಭಗವಂತನನ್ನು ಪ್ರಾರ್ಥಿಸುತ್ತದೆ. ದೇಹಧಾರಿಯಾದ ಜೀವವು ಶಿಶುವಿನ ರೂಪದಲ್ಲಿ , ಎಂಟು ಮತ್ತು ಒಂಬತ್ತನೆಯ ತಿಂಗಳಲ್ಲಿ ಗರ್ಭಕೋಶದೊಳಗಿದ್ದು, ಮಲಮೂತ್ರದ ನಡುವೆ ಬಿದ್ದುಕೊಂಡು ಸಮಯವನ್ನು ಕಳೆಯುತ್ತದೆ. ಅತ್ತಿಂದಿತ್ತ, ಇತ್ತಿಂದತ್ತ ಹೊಟ್ಟೆಯೊಳಗಡೆ ಚಲಿಸುತ್ತಾ ತಾಯಿಯ ಉದರದಿಂದ ಹೊರಬರಲು ಸಮಯವನ್ನು ಕಾಯುತ್ತಿರುತ್ತದೆ.

ಮಗುವು ಹುಟ್ಟುವ ಮುನ್ನ ಗರ್ಭಾವಸ್ಥೆಯಲ್ಲಿ ಯಾವ ಮನಃಸ್ಥಿತಿಯಲ್ಲಿ ಇರುತ್ತದೆ ಎನ್ನುವುದು ಇಂದಿನ ವಿಜ್ಞಾನಿಗಳಿಗೂ ವಿವರಿಸಲು ಸಾಧ್ಯವಿಲ್ಲ. ಗರ್ಭದ ಬೆಳವಣಿಗೆಯ ಬಗ್ಗೆ ವಿಜ್ಞಾನಿಗಳು ವಿವರಿಸಬಹುದೇ ಹೊರತು, ಗರ್ಭದಲ್ಲಿರುವ ಮಗುವಿನ ಮನಃಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಸಹಸ್ರಾರು ವರ್ಷಗಳ ಹಿಂದೆ ವೇದವ್ಯಾಸರು ಸಂಕಲಿಸಿದ ಭಾಗವತದಲ್ಲಿ ವಿವರಿಸಲಾಗಿದೆ. ಈ ವಿಚಾರ ಇಂದಿಗೂ ವಿಜ್ಞಾನಿಗಳ ಪಾಲಿಗೆ ಸವಾಲಾಗಿ ಪರಿಣಮಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *