LATEST NEWS
ಕೇರಳ ಜ್ಯೋತಿಷಿ ಸಲಹೆ – ಶ್ರೀಲಂಕಾ ಪ್ರಧಾನಿಯಿಂದ ಕೊಲ್ಲೂರಿನಲ್ಲಿ ನವಚಂಡಿಕಾ ಹೋಮ
ಕೇರಳ ಜ್ಯೋತಿಷಿ ಸಲಹೆ – ಶ್ರೀಲಂಕಾ ಪ್ರಧಾನಿಯಿಂದ ಕೊಲ್ಲೂರಿನಲ್ಲಿ ನವಚಂಡಿಕಾ ಹೋಮ
ಉಡುಪಿ ಜುಲೈ 26: ಕೇರಳದ ಜ್ಯೋಷಿಯೊಬ್ಬರ ಸಲಹೆಯಂತೆ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಬೇಟಿ ನೀಡಿ ದೇವಿಯ ಸನ್ನಿಧಿಯಲ್ಲಿ ನವಚಂಡಿಕಾಹೋಮ ಮಾಡಿಸಿದ್ದಾರೆ.
ಇಂದು ಮುಂಜಾನೆ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಶ್ರೀಲಂಕಾದಿಂದ ಬೆಂಗಳೂರು ವಿಮಾನ ನಿಲ್ದಾಣ ಆಗಮಿಸಿ ಅಲ್ಲಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಶ್ರೀಲಂಕಾ ಪ್ರಧಾನಿ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬಿರುಸಿನ ಮಳೆ ಸುರಿಯುತ್ತಿತ್ತು. ಹಾಗಾಗಿ, ಮಂಗಳೂರಿನಿಂದ ಕೊಲ್ಲೂರಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಲು ಸಾಧ್ಯವಾಗಲಿಲ್ಲ ಬದಲಾಗಿ ರಸ್ತೆ ಮಾರ್ಗವಾಗಿ ಅವರನ್ನು ಕರೆತರಲಾಯಿತು.
ಬೆಳಿಗ್ಗೆ 11.40ರ ಸುಮಾರಿಗೆ ದೇಗುಲಕ್ಕೆ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಪತ್ನಿಯ ಸಮೇತ ದೇವಸ್ಥಾನಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಸ್ವಾಗತ ಕೋರಲಾಯಿತು. ನಂತರ ದೇವರ ದರ್ಶನ ಪಡೆದು ಪ್ರಾರ್ಥಿಸಿ, ನವಚಂಡಿಕಾ ಹೋಮದಲ್ಲಿ ಭಾಗಿಯಾಗಿ ಮಹಾಪೂಜೆಯನ್ನು ಪೂರೈಸಿ ಪ್ರಸಾದ ಸ್ವೀಕರಿಸಿದರು.
ಕೇರಳದ ಜ್ಯೋತಿಷಿಯೊಬ್ಬರು ಶ್ರೀಲಂಕಾ ಪ್ರಧಾನಿಯವರಿಗೆ ಕೊಲ್ಲೂರಿನಲ್ಲಿ ಚಂಡಿಕಾಹೋಮ ಮಾಡಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ರಾಜಕೀಯ ಜೀವನದಲ್ಲಿ ಏಳ್ಗೆಯಾಗುತ್ತದೆ ಎಂದು ಸಲಹೆ ನೀಡಿದ್ದರು. ಅದರಂತೆ ಇಂದು ಶ್ರೀಲಂಕಾ ಪ್ರಧಾನಿ ಅವರು ಪತ್ನಿ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಕಳೆದ ಬಾರಿ ಕ್ಷೇತ್ರಕ್ಕೆ ಬಂದಾಗ ದೇವರಲ್ಲಿ ಹರಕೆ ಹೊತ್ತಿದ್ದರು. ಹರಕೆ ಈಡೇರಿದರೆ ಮತ್ತೊಮ್ಮೆ ಕ್ಷೇತ್ರಕ್ಕೆ ಬರುವುದಾಗಿ ತಿಳಿಸಿದ್ದರು. ಅದರಂತೆ, ಬಂದು ದೇವಿಯ ದರ್ಶನ ಪಡೆದಿದ್ದಾರೆ ಎಂದು ದೇವಳ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಶ್ರೀಲಂಕಾ ದೇಶ ಅಭಿವೃದ್ಧಿಯಾಗಬೇಕು, ರಾಜಕೀಯ ತೊಂದರೆಗಳು ಎದುರಾಗಬಾರದು, ವೈಯಕ್ತಿಕವಾಗಿ ರಾಜಕೀಯ ಏಳ್ಗೆಯಾಗಬೇಕು ಎಂದು ದೇವರಲ್ಲಿ ಸಂಕಲ್ಪ ಮಾಡಿಕೊಂಡರು ಎಂದು ಅರ್ಚಕರು ತಿಳಿಸಿದರು .
ಗುರುವಾರ ವಿಕ್ರಮಸಿಂಘೆ ಅವರ ಹೆಸರಿನಲ್ಲಿ ಪಾರಾಯಣ, ಕಲಶ ಸ್ಥಾಪನೆ ನಡೆದಿತ್ತು. ಬೆಳಿಗ್ಗೆ 8ರಿಂದ ನವಚಂಡಿ ಹೋಮ ಆರಂಭವಾಗಿ, ಮಧ್ಯಾಹ್ನ ಪೂರ್ಣಾಹುತಿಯಾಯಿತು ಎಂದು ಮಾಹಿತಿ ನೀಡಿದರು.
ಶ್ರೀಲಂಕಾ ಪ್ರಧಾನಿ ಆಗಮನದ ಹಿನ್ನಲೆಯಲ್ಲಿ ಭಾರಿ ಬಂದೋಬಸ್ತ್ ಎರ್ಪಡಿಸಲಾಗಿತ್ತು, ಭಾರತೀಯ ಸೇನೆಯ ಬಂದೋಬಸ್ತ್ ನಲ್ಲಿ ಶ್ರೀಲಂಕಾ ಪ್ರಧಾನಿ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಸುತ್ತಮುತ್ತ ಅಘೋಷಿತ ಬಂದ್ ವಾತಾವಾರಣ ನಿರ್ಮಾಣವಾಗಿತ್ತು.