LATEST NEWS
ಮತದಾರರ ಪಟ್ಟಿ : ಏಪ್ರಿಲ್ 8 ರಂದು ವಿಶೇಷ ಅಭಿಯಾನ
ಮತದಾರರ ಪಟ್ಟಿ : ಏಪ್ರಿಲ್ 8 ರಂದು ವಿಶೇಷ ಅಭಿಯಾನ
ಉಡುಪಿ, ಏಪ್ರಿಲ್ 3: ರಾಜ್ಯ ವಿಧಾನಸಭಾ ಚುನಾವಣೆ ಪ್ರಯುಕ್ತ ಏಪ್ರಿಲ್ 8 ರಂದು ವಿಶೇಷ ಮತದಾರರ ಪರಿಷ್ಕರಣೆ ಶಿಬಿರ ಆಯೋಜಿಸಲಾಗಿದ್ದು , ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಪರಿಶೀಲನೆ ಮಾಡಲು ಅವಕಾಶವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಮಂಗಳವಾರ, ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ 1.25 ಲಕ್ಷ ರೂ ವೆಚ್ಚದಲ್ಲಿ ಅಳವಡಿಸಲಾಗಿದ್ದ, ಶುಧ್ದ ಕುಡಿಯುವ ನೀರು ಘಟಕ ಉದ್ಘಾಟಿಸಿ ಮಾತನಾಡಿದರು.
ಏಪ್ರಿಲ್ 8 ರಂದು ನಡೆಯುವ ವಿಶೇಷ ಪರಿಷ್ಕರಣೆ ಶಿಬಿರದಲ್ಲಿ, ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಸಂಬಂದಪಟ್ಟ ಎಲ್ಲಾ ಬಿಎಲ್‍ಓ ಗಳು ಆಯಾ ಕಚೇರಿಗಳಲ್ಲಿ ಉಪಸ್ಥಿತರಿದ್ದು, ಮತದಾರರ ಪಟ್ಟಿಯಲ್ಲಿ ಮತದಾರರಿಗೆ ಸಂಬಂದಪಟ್ಟ ನ್ಯೂನತೆಗಳನ್ನು ಸರಿಪಡಿಸಲಿದ್ದಾರೆ, ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಏಪ್ರಿಲ್ 14 ಕೊನೆಯ ದಿನವಾಗಿದ್ದು, 18 ವರ್ಷ ತುಂಬಿದ ಯುವಜನತೆ ಇದರ ಪ್ರಯೋಜನ ಪಡೆಯುವಂತೆ ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ ಮತದಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಏಪ್ರಿಲ್ 5 ರಂದು ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿದೆ ಅಲ್ಲದೆ ಕಳೆದ ಬಾರಿ ಕಡಿಮೆ ಮತದಾನ ನಡೆದ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಂಚೆ ಕಾರ್ಡ್ ನಲ್ಲಿ ವಿಶೇಷ ಆಮಂತ್ರಣ ಸಿದ್ದಪಡಿಸಿದ್ದು, ಇದನ್ನು ಆ ಪ್ರದೇಶದ ಎಲ್ಲಾ ಕುಟುಂಬಗಳಿಗೆ , ಸಂಬಂದಪಟ್ಟ ಪಂಚಾಯತ್ ಗಳ ಮೂಲಕ ಮನೆ ಬಾಗಿಲಿಗೆ ತಲುಪಿಸಿ, ಮತದಾನ ಕೇಂದ್ರಗಳಿಗೆ ಬಂದು ಮತದಾನ ಮಾಡುವಂತೆ ಆಮಂತ್ರಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.