Connect with us

    LATEST NEWS

    ಇಸ್ಲಾಂನ ಮಹಾಪುರುಷರಿಗಿಲ್ಲದ ಜನ್ಮದಿನಾಚರಣೆ ಟಿಪ್ಪುವಿಗೇಕೆ ? ರಹೀಂ ಉಚ್ಚಿಲ್

    ಇಸ್ಲಾಂನ ಮಹಾಪುರುಷರಿಗಿಲ್ಲದ ಜನ್ಮದಿನಾಚರಣೆ ಟಿಪ್ಪುವಿಗೇಕೆ ? ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾದ್ಯಕ್ಷ ರಹೀಂ ಉಚ್ಚಿಲ್ ಅವರ ವಿಶೇಷ ಲೇಖನ.

    ನನ್ನ ಹಲವಾರು ಮಿತ್ರರು ಕೇಳುತ್ತಲೇ ಇದ್ದಾರೆ. ಟಿಪ್ಪು ಜಯಂತಿ ಬಗ್ಗೆ ನಿಮ್ಮ ಅಭಿಪ್ರಾಯ ವೇನು? ಅವರಿಗೆ ನನ್ನ ಉತ್ತರ ಇಲ್ಲಿದೆ. ರಾಜಕಾರಣಿ ಎನ್ನುವುದಕ್ಕಿಂತ ಹೆಚ್ಚಾಗಿ ನಾನು ಒಬ್ಬ ಇಸ್ಲಾಂ ಅನುಯಾಯಿ. ನನಗೆ ತಿಳಿದಂತೆ ಪ್ರವಾದಿ ಮುಹಮ್ಮದ್ ಸ.ಅ. ರವರ ಜನ್ಮ ಜಯಂತಿ ಯನ್ನು ಈದ್ ಮಿಲಾದ್ ಹೆಸರಲ್ಲಿ ಇಡೀ ವಿಶ್ವ ಕೊಂಡಾಡುತ್ತಿದೆ. ಇದಕ್ಕೂ ಕೆಲವು ವರ್ಗ ವಿರೋಧ ವ್ಯಕ್ತ ಪಡಿಸುತ್ತಾ ಬಂದಿದೆ. ಆದರೆ ನಾನು ಈ ವಿಭಾಗಕ್ಕೆ ಸೇರಿದವನಲ್ಲ.

    ನನಗೆ ತಿಳಿದಂತೆ ವಿಶ್ವದ ಎಲ್ಲಾ ಮಸೀದಿ ಗಳಲ್ಲಿ ಶುಕ್ರವಾರದ ಜುಮಾ ನಮಾಝ್ ಗಿಂತ ಮೊದಲು ನಡೆಯುವ ಕುತ್ಬಾ ದಲ್ಲಿ ವಿಶ್ವ ಮುಸ್ಲಿಮರ ಜಾಗತಿಕ ಖಲೀಫ಼ ರಾಗಿದ್ದ ಅಬೂಬಕ್ಕರ್ ಸಿದ್ದೀಕ್ (ರ.ಅ). ಉಮರ್ ಇಬ್ನ್ ಖತ್ತಾಬ್(ರ.ಅ) ಉಸ್ಮಾನ್ ಇಬ್ನ್ ಅಫ಼್ವಾನ್ (ರ.ಅ) ಅಲಿ ಇಬ್ನ್ ಅಬೂತಾಲಿಬ್ (ರ.ಅ) ಇವರ ಹೆಸರನ್ನು ಕಡ್ದಾಯ ವಾಗಿ ಪಠಿಸಬೇಕು. ಇವರ ಜನ್ಮ ಜಯಂತಿ ಆಚರಿಸಿದ್ದನ್ನು ನೋಡಿಲ್ಲ. ಉತ್ತರ ಭಾರತಕ್ಕೆ ಇಸ್ಲಾಮಿನ ಸಂದೇಶದೊಂದಿಗೆ ಬಂದ ಖ್ವಾಜಾ ಮೊಹಿನುದ್ದೀನ್ ಚಿಶ್ತಿ ಅಜ್ಮೀರ್ (ರ.ಅ) ದಕ್ಷಿಣ ಕ್ಕೆ ಇಸ್ಲಾಂ ಪಸರಿಸಿದ ಕೇರಳದಲ್ಲಿ ಪ್ರಥಮ ಮಸೀದಿ ನಿರ್ಮಿಸಿದ ಮಾಲಿಕ್ ದೀನಾರ್ (ರ.ಅ) ರವರ ಜನ್ಮ ಜಯಂತಿ ಆಚರಿಸಿದ್ದನ್ನು ಕೇಳಿಲ್ಲ.

    ಈ ದೇಶದ ಸಹಸ್ರಾರು ಮುಸ್ಲಿಮ್ ಮಹಾ ಪುರುಷರ ಜನ್ಮ ಜಯಂತಿಯನ್ನು ಆಚರಿಸಿದ್ದು ನೋಡಿಲ್ಲ. ಮದ್ರಸ ಗಳಲ್ಲಿ ಕಲಿಯುವ ಮಕ್ಕಳಿಗೆ ಉಸ್ತಾದರು ಅಥವಾ ಮುಸ್ಲಿಂ ಧರ್ಮ ಗುರುಗಳು ಜನ್ಮ ಜಯಂತಿ(ಬರ್ತ್ ಡೇ ಆಚರಣೆ) ಮಾಡ ಬಾರದೆಂದು ತಾಕೀತು ಮಾಡಿದ್ದನ್ನು ಕೇಳಿದ್ದೇನೆ. ಹೀಗಿರುವಾಗ ಈ ಇಸ್ಲಾಮಿನ ನಿಯಮ ಟಿಪ್ಪುವಿಗೆ ಅನ್ವಯ ವಾಗುವುದಿಲ್ಲವೇ? ಎಂಬುವುದೇ ನನ್ನ ತಲೆ ಕೊರೆಯುವ ಪ್ರಶ್ನೆ.
    ಗಾಂಧಿ ಜಯಂತಿ, ವಾಲ್ಮೀಕಿ ಜಯಂತಿ, ಬಸವ ಜಯಂತಿ, ಬುದ್ದ ಜಯಂತಿ ಯನ್ನು ನಾವು ವಿರೋಧಿ ಸುವಂತಿಲ್ಲ. ಯಾಕೆಂದರೆ ಹಿಂದೂ, ಕ್ರೈಸ್ತ ,ಬೌದ್ಧ ಮುಂತಾದ ಧರ್ಮ ದಲ್ಲಿ ಈ ಜನ್ಮ ಜಯಂತಿಗಳು ಅನಾದಿಕಾಲದಿಂದಲೂ ಆಚರಣೆ ಯಲ್ಲಿದೆ. ಇಸ್ಲಾಮಿನಲ್ಲಿ ಇದಕ್ಕೆ ಅವಕಾಶ ಇಲ್ಲ ಎನ್ನುವ ಕಾರಣಕ್ಕಾಗಿ ಯೇ ಭಾರತದ ಮುಸ್ಲಿಂ ವಿದ್ವಾಂಸರು ಸ್ವಾತಂತ್ರ್ಯ ಹೋರಾಟಗಾರರ, ಸಂತರ, ಮಹಾಪುರುಶರ ಜನ್ಮಜಯಂತಿ ಕೊಂಡಾಡಲು ಯಾವ ಸರಕಾರಕ್ಕೂ ಅರ್ಜಿ ಹಾಕಿರಲಿಲ್ಲ.

    ಮುಸ್ಲಿಂ ಸಮುದಾಯದ ಓಲೈಕೆ ಗಾಗಿ ಆ ಸಮುದಾಯ ಕೇಳಿದ ತಕ್ಷಣ ತಥಾಸ್ತು ಅನ್ನುವ ಸೋ ಕಾಲ್ಡ್ ಜಾತ್ಯಾತೀತ ಪಕ್ಷಕ್ಕೆ ಯಾರೂ ಜನ್ಮ ಜಯಂತಿಗಳಿಗೆ ಅರ್ಜಿ ಹಾಕಿಲ್ಲ. ಇನ್ನು ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳು ಯಾರದ್ದೇ ಜನ್ಮ ಜಯಂತಿ ಆಚರಿಸಿದರೆ ಅದಕ್ಕೆ ಅಭ್ಯಂತರವಿಲ್ಲ. ಕಳೆದ ಹಲವಾರು ವರ್ಷ ದಿಂದ ಶ್ರೀರಂಗ ಪಟ್ಟಣ ಸೇರಿದಂತೆ ಹಲವು ಕಡೆ ಕೆಲವು ಸಂಘಟನೆ ಗಳು ಟಿಫ್ಪು ಜಯಂತಿ ಯನ್ನು ಆಚರಿಸುತ್ತಾ ಬಂದಿದೆ. ಅದಕ್ಕೆ ಯಾರೂ ವಿರೋಧ ವ್ಯಕ್ತ ಪಡಿಸಿರಲಿಲ್ಲ. ಯಡಿಯೂರಪ್ಪ ರವರು ಖಾಸಗಿ ಸಂಘಟನೆ ಯ ಆಹ್ವಾನ ದ ಮೇರೆಗೆ ಆ ಕಾರ್ಯಕ್ರಮಕ್ಕೆ ಹೋಗಿದ್ದರೇ ಹೊರತು ಸರಕಾರದ ಪ್ರತಿನಿಧಿಯಾಗಿ ಅಲ್ಲ.

    ಟಿಪ್ಪೂ ಮತಾಂದ ಕ್ರೂರಿ ಕನ್ನಡ ವಿರೋಧಿ ಅನ್ನುವವರೂ ಇದ್ದಾರೆ, ಟಿಪ್ಪು ದೇಶ ಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ ಅನ್ನುವವರೂ ಇದ್ದಾರೆ. ಅಂತೂ ಒಂದು ವ್ಯಕ್ತಿಯ ಬಗ್ಗೆ ಇಬ್ಬಗೆ ಅಭಿಪ್ರಾಯ ಇರುವಾಗ ಇತಿಹಾಸಕಾರರೂ ಅಧ್ಯಯನ ತಂಡ ದವರನ್ನೂ ಪರ ವಿರೋಧಿ ಪ್ರತಿ ನಿಧಿಗಳನ್ನು ಒಟ್ಟು ಸೇರಿಸಿ ಸಾದಕ ಬಾದಕ ಚರ್ಚಿಸಿ ಸರಕಾರ ಮಹತ್ವದ ತೀರ್ಮಾನ ತೆಗೆದು ಕೊಳ್ಳ ಬೇಕಿತ್ತು. ಮುಸ್ಲಿಂ ಧಾರ್ಮಿಕ ವಿದ್ವಾಂಸರ ಪರ ಹಾಗೂ ಆಕ್ಷೇಪಣೆಯನ್ನೂ ಪರಿಗಣನೆಗೆ ತೆಗೆಯ ಬೇಕಾಗಿತ್ತು. ಆದರೆ ಅದೆಲ್ಲವನ್ನು ಗಾಳಿಗೆ ತೂರಿ ಸಿದರಾಮಯ್ಯ ಸರಕಾರ ಟಿಫ್ಪು ಜಯಂತಿ ಹೆಸರಲ್ಲಿ ಸಂಘರ್ಷ ಹುಟ್ಟು ಹಾಕಿದ್ದು ಸರಿಯಾದ ನಡೆಯಲ್ಲ.

    ಟಿಪ್ಪು ಅಂದಿನ ರಾಜ ಆಡಳಿತಕ್ಕೆ ಬೇಕಾದಂತೆ ನಡೆದು ಕೊಂಡಿದ್ದ. ಟಿಪ್ಪುವನ್ನು ವಿರೋಧಿಸಿ ಯಾರಾದರೂ ದ್ವನಿ ಎತ್ತಿದರೆ ಇಲ್ಲಿಯ ಮುಸ್ಲಿಮರು ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿದಂತೆ ಎಂಬಂತೆ ಆಡಬೇಕಿಲ್ಲ. ಟಿಪ್ಪು ಪರವಾಗಿ ಮಾತಾಡುವವರೆಲ್ಲರೂ ಮುಸ್ಲಿಂ ಪರ ಒಲವು ಉಳ್ಳವರೂ ಎಂದೂ ಬಗೆಯ ಬೇಕಾಗಿಲ್ಲ. ರಾಜರ ಆಡಳಿತ ಬ್ರಿಟಿಷ್ ಆಡಳಿತದ ವಿರುದ್ದ ಸಂಘಟಿತರಾಗಿ ಹೋರಾಡಿ ಗಳಿಸಿದ ಪ್ರಜಾಪ್ರಭುತ್ವ ಆಡಳಿತದಲ್ಲಿ ಸದ್ಯಕ್ಕೆ ಕ್ಕೆ ದೇಶವನ್ನು ಅತ್ಯುತ್ತಮ ರೀತಿಯಲ್ಲಿ ಆಳಿದ ಅಥವಾ ಆಳುತ್ತಿರುವ ಜನಪ್ರತಿನಿದಿಗಳೇ ನಮಗೆ ಆದರ್ಶ. ಒಂದು ಜನ್ಮ ಜಯಂತಿ ಯನ್ನು ಹಠಕ್ಕೆ ಬಿದ್ದು ಆಚರಿಸಿ ಪರಸ್ಪರ ಸಂಬಂಧ ಗಳನ್ನು ಮುರಿಯುವ ಪ್ರಯತ್ನ ಸರಕಾರಗಳು ಮಾಡುತ್ತಿರುವುದು ಖಂಡನೀಯ.

    ಟಿಪ್ಪು ಸುಲ್ತಾನ್ ಬಗ್ಗೆ ಮತ್ತೊಂದು ಕೋನ ದಿಂದ ಯೋಚಿಸುದಾದರೆ. ಟಿಪ್ಪು ಓರ್ವ ಮಹಾನ್ ದೈವ ಭಕ್ತನಾಗಿದ್ದ. ಅಲ್ಲಾಹನಿಗಲ್ಲದೆ ಇನ್ಯಾರಿಗೂ ತಲೆಭಾಗದ ಇಸ್ಲಾಮ್ ಗೆ ಸಂಪೂರ್ಣ ನಿಷ್ಟೆ ಹೊಂದಿದ್ದ ಎನ್ನಲಾಗುತ್ತಿತ್ತು. ಈ ಕಾರಣಕ್ಕಾಗಿ ಹಜ್ರತ್ ಎಂದು ಕೆಲವರು ಕರೆಯುತ್ತಾರೆ. ಇಂತಹಾ ವ್ಯಕ್ತಿ ದೇವಸ್ಥಾನ ಕ್ಕೆ ತೆರಳಿ ಇತರ ಧರ್ಮದ ದೇವರಲ್ಲಿ ಹರಕೆ ನೀಡುತ್ತಾ ಮೊರೆ ಇಡಲು ಹೇಗೆ ಸಾಧ್ಯ? ತನ್ನ ಧರ್ಮ ವನ್ನು ಪೂಜಿಸಿ ಇತರ ಧರ್ಮವನ್ನು ಗೌರವಿಸುವ ಪದ್ದತಿ ಅಂದೂ ಚಾಲ್ತಿಯಲ್ಲಿತ್ತು ಈಗಲೂ ಇದೆ.ಅದರೆ ಕೆಲವು ದೇವಸ್ಥಾನ ದಲ್ಲಿ ಈಗಲೂ ಈ ಹೆಸರಲ್ಲಿ ಆರತಿ ಬೆಳಗಲಾಗುತ್ತಿದೆ ಎಂದು ಹೇಳಲಾಗುತ್ತದೆ.

    ಇದು ಇಸ್ಲಾಮಿನ ಮೂಲ ಸಿದ್ದಾಂತಕ್ಕೆ ವಿರೊದವಲ್ಲವೇ? ಆದ್ದರಿಂದ ಐತಿಹಾಸಿಕ ವಾಗಿ ಮಾತ್ರವಲ್ಲದೆ ಧಾರ್ಮಿಕ ವಾಗಿಯೂ ಹಲವು ಸಂಶಯಗಳ ರಹಸ್ಯವನ್ನು ಬಿಟ್ಟು ಹೋಗಿದ್ದಾರೆ. ಇದೆಲ್ಲದರ ಬಗ್ಗೆ ರಾಜಕೀಯ ರಹಿತವಾಗಿ ಚರ್ಚೆಯಾಗ ಬೇಕು..ಟಿಪ್ಪು ಹೆಸರಲ್ಲಿ ಪರಸ್ಪರ ಪೈಪೋಟಿ ನಡೆಸುದಕಿಂತ ಜನ್ಮ ಜಯಂತಿಗಳ ಬಗ್ಗೆ ಇರುವ ಗೊಂದಲಗಳನ್ನು ಮುಸ್ಲಿಂ ಧರ್ಮದ ಧರ್ಮಗುರುಗಳು ಮೌನ ಮುರಿದು ಮಾತಾಡುವ ಮೂಲಕ ಶಾಶ್ವತ ತೆರೆಯನ್ನು ಎಳೆಯಬೇಕು.

    ರಹೀಂ ಉಚ್ವಿಲ್

    ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾದ್ಯಕ್ಷ

    Share Information
    Advertisement
    Click to comment

    You must be logged in to post a comment Login

    Leave a Reply