BANTWAL
ವಿಧಾನಸಭಾಧ್ಯಕ್ಷ ಹುದ್ದೆಯ ಮಹತ್ವ ಹಿರಿಯ ಶಾಸಕರಿಗೆ ಗೊತ್ತಿಲ್ಲ – ಬಿ. ಜನಾರ್ಧನ ಪೂಜಾರಿ
ಬಂಟ್ವಾಳ ಮೇ 30: ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಯು.ಟಿ ಖಾದರ್ ಕಾಂಗ್ರೇಸ್ ನ ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಜನಾರ್ಧನ ಪೂಜಾರಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬಂದಿರುವುದು ಸಂತಸ ತಂದಿದ್ದು, ವಿಧಾನಸಭಾಧ್ಯಕ್ಷ ಹುದ್ದೆ ತಿರಸ್ಕರಿಸಿದ ಕೆಲವೊಂದು ಹಿರಿಯ ಶಾಸಕರಿಗೆ ಅದರ ಮಹತ್ವ ಗೊತ್ತಿಲ್ಲ. ಯುವ ಉತ್ಸಾಹಿ ಯು.ಟಿ.ಖಾದರ್ ಈ ಹುದ್ದೆ ಒಪ್ಪಿಕೊಂಡು ಅಧಿಕಾರ ಸ್ವೀಕರಿಸಿದ ಬಳಿಕ ಅರ್ಥಪೂರ್ಣವಾಗಿ ಮಾತನಾಡಿದ್ದಾರೆ’ ಎಂದು ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.
ನಾನು ಟಿ.ವಿ.ಪರದೆಯಲ್ಲಿ ಕಾರ್ಯಕ್ರಮ ವೀಕ್ಷಿಸಿದ್ದೇನೆ. ಸ್ಪೀಕರ್ ಹುದ್ದೆ ಗೌರವ ಉಳಿಸುವ ಮಹತ್ತರ ಜವಾಬ್ದಾರಿ ಹೊಂದಿರುವ ನಿಮ್ಮ ನಡೆ ಬಗ್ಗೆ ನನಗೆ ಹೆಮ್ಮೆ ಅನಿಸಿತು. ಕೇಂದ್ರ ಸಚಿವರಾಗಿದ್ದ ಕೆಲವರು ಶಾಸಕರಾದ ಬಳಿಕ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವುದು ಅವರಲ್ಲಿನ ಅಧಿಕಾರ ದಾಹವನ್ನು ಪ್ರತಿಬಿಂಬಿಸುತ್ತದೆ’ ಎಂದರು. ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ‘ಈ ಹಿಂದಿನಿಂದಲೂ ನನಗೆ ಮಾರ್ಗದರ್ಶನ ನೀಡುತ್ತ ಬಂದಿರುವ ಹಿರಿಯ ನಾಯಕ ಪೂಜಾರಿ ಅವರು ಆಶೀರ್ವಾದ ಮಾಡಿದ್ದಾರೆ. ಸ್ಪೀಕರ್ ಹುದ್ದೆ ಗೌರವ ಉಳಿಸುವ ಜೊತೆಗೆ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯಲು ಸಲಹೆ ನೀಡಿದ್ದಾರೆ’ ಎಂದರು.