LATEST NEWS
ಲಾಕ್ ಡೌನ್ ನಲ್ಲಿ ಕನ್ನಡ ಕಲಿತು ಅಪ್ಪಟ ಕನ್ನಡತಿಯಾದ ಈ ಸ್ಪೇನ್ ಹುಡುಗಿ….!!

ಉಡುಪಿ : ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಭಾರತದ ಸಂಸ್ಕೃತಿಗೆ ಮಾರು ಹೋಗದವರಿಲ್ಲ. ಲಕ್ಷಾಂತರ ಮಂದಿ ವಿದೇಶಿಗರು ಇಲ್ಲಿನ ಸಂಸ್ಕೃತಿ ತಿಳಿದುಕೊಳ್ಳಲು ಭಾರತಕ್ಕೆ ಬರುತ್ತಾರೆ. ಅದೇ ರೀತಿ, ಸ್ಪೇನ್ನ ಯುವತಿಯೊಬ್ಬಳು ಪ್ರವಾಸಕ್ಕೆಂದು ಬಂದು ಉಡುಪಿಯ ಹೆರಂಜಾಲಿನ ಮನೆ ಮಗಳಾಗಿಬಿಟ್ಟಿದ್ದಾಳೆ. ಜಿಲ್ಲೆಯ ಬೈಂದೂರಿನಲ್ಲಿ ಇಂತಹ ಅಪರೂಪದ ಘಟನೆ ನಡೆದಿದೆ.
ಹೌದು, ಸ್ಪೇನ್ ಮೂಲದ ಯುವತಿ ಥೆರೆಸಾ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ರು. ಆದರೆ ದೇಶ ಲಾಕ್‌ಡೌನ್ ಆದ ನಂತರ ಕುಂದಾಪುರದ ಹೆರಂಜಾಲಿನಲ್ಲಿ ಲಾಕ್ ಆಗಿಬಿಟ್ಟಿದ್ದಾರೆ. ಈ ನಡುವೆ ಇವರು ನಮ್ಮ ಭಾಷೆ, ಉಡುಗೆ-ತೊಡುಗೆ, ಆಚರಣೆಗಳಿಗೆ ಮಾರು ಹೋಗಿದ್ದಾರೆ. ಹೀಗಾಗಿ, ಥೆರೆಸಾ ಸಹ ನಮ್ಮಲೊಬ್ಬರಾಗಿ ಕನ್ನಡ ಕಲಿತು ಇಲ್ಲಿನ ಉಡುಗೆ-ತೊಡುಗೆಗಳನ್ನು ಹಾಕಿಕೊಂಡು ಅಪ್ಪಟ ಕರಾವಳಿ ಕನ್ನಡತಿಯಂತೆ ಕಾಣಿಸುತ್ತಾರೆ. ಕೃಷ್ಣ ಪೂಜಾರಿ ಹಾಗೂ ಥೆರೆಸಾ ಸಹೋದರ ಕಾರ್ಲೊಸ್ ಮುಂಬೈನಲ್ಲಿ ಸಹೋದ್ಯೋಗಿಗಳು. ಲಾಕ್‌ಡೌನ್‌ಗೂ ಮುನ್ನ ಕೃಷ್ಣಪೂಜಾರಿ ಸ್ವಂತ ಊರು ಬೈಂದೂರಿನ ಹೇರಂಜಾಲಿಗೆ ಬಂದಿದ್ದರು. ಇದೇ ಸಂದರ್ಭ ಥೆರೆಸಾ ಸಂಕಷ್ಟಕ್ಕೆ ಸಿಲುಕಿರುವ ಸುದ್ದಿ ತಿಳಿದ ಕಾರ್ಲೊಸ್ ಆಕೆಗೆ ಕೆಲವು ದಿನ ಆಶ್ರಯ ನೀಡುವಂತೆ ಕೃಷ್ಣಪೂಜಾರಿ ಅವರನ್ನು ಕೇಳಿಕೊಂಡರು. ಸ್ಪಂದಿಸಿದ ಗೆಳೆಯ ಥೆರೆಸಾಗೆ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು.

ಥೆರೆಸಾ ಸೊರಿಯಾನೊ ಎಂಜಿನಿಯರಿಂಗ್ ಮುಗಿಸಿದ್ದು ಸ್ಪೇನ್‌ನಲ್ಲಿ ಗಾರ್ಡನ್ ಡಿಸೈನಿಂಗ್ ವೃತ್ತಿಯಲ್ಲಿದ್ದಾರೆ. ಥೆರೆಸಾ ಮಾತೃಭಾಷೆ ಸ್ಪಾನಿಷ್. ಆದರೆ ಸಂವಹನಕ್ಕೆ ಸಾಲುವಷ್ಟು ಇಂಗ್ಲೀಷ್ ಕಲಿತಿದ್ದಾರೆ. ಆರಂಭದಲ್ಲಿ ಆಕೆಯ ಜತೆ ಮಾತನಾಡುವುದು, ಬೇಕು ಬೇಡಗಳನ್ನು ತಿಳಿಯಲು ಮನೆಯವರಿಗೆ ಕಷ್ಟವಾಯಿತು. ಬರಬರುತ್ತಾ ಎಲ್ಲರ ಜತೆ ಹೊಂದಿಕೊಳ್ಳುತ್ತಾ ಕುಟುಂಬದ ಸದಸ್ಯೆಯಂತಾದಳು ಎಂದರು ಕೃಷ್ಣ ಪೂಜಾರಿ. ಕರಾವಳಿಯ ಸಂಸ್ಕೃತಿ, ಆಚಾರ, ವಿಚಾರ, ಆಚರಣೆ ಹಾಗೂ ಭಾಷೆಯ ಕಲಿಕೆಯತ್ತ ಆಸಕ್ತಿ ತೋರಿದ ಥೆರೆಸಾ ಕೆಲವೇ ದಿನಗಳಲ್ಲಿ ಕನ್ನಡದ ವರ್ಣಮಾಲೆ ಬರೆಯಲು ಹಾಗೂ ಉಚ್ಛಾರ ಮಾಡುವುದನ್ನು ಕಲಿತರು. ಕುಂದಾಪುರ ಭಾಷೆಯ ಕೆಲವು ಪದಗಳನ್ನೂ ಚೆಂದ ಮಾತನಾಡುತ್ತಾರೆ
ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿ ಕಾಲ ಕಳೆಯದ ಥೆರೆಸಾ ಹಾಡಿಗೆ ಹೋಗಿ ದೆರಲೆ ಹಾಯುವುದು, ನೆಲಗಡಲೆ ಕೀಳುವುದು, ನಾಟಿಗೆ ಭತ್ತದ ಪೈರು ಹೊರುವುದು, ಬಾವಿಯಿಂದ ನೀರು ಸೇದುವುದು, ಹಸುಗಳಿಗೆ ಹುಲ್ಲು ಹಾಕುವುದು, ಹಾಲು ಕರೆಯುವುದು, ಕೋಳಿಗೆ ಮೇವು ಹಾಕುವುದು, ಅಡುಗೆ ಕೆಲಸಕ್ಕೆ ನೆರವಾಗುವುದರ ಜತೆಗೆ, ಕುಂದಾಪುರ ಹಾಗೂ ಕನ್ನಡ ಭಾಷೆ ಕಲಿಯಲು ಸಮಯವನ್ನು ಬಳಸಿಕೊಂಡಿದ್ದಾರೆ. ಕರಾವಳಿ ಸಂಸ್ಕೃತಿಯ ಮೋಹಕ್ಕೆ ಸಿಲುಕಿರುವ ಅವರು ಯಕ್ಷಗಾನ ಕಲಿಯುವ ಆಸಕ್ತಿ ಹೊಂದಿದ್ದಾರೆ. ಲಾಕ್‌ಡೌನ್‌ನಿಂದಾಗಿ ಈ ಬಾರಿ ಕಲಿಕೆ ಸಾಧ್ಯವಾಗದಿದ್ದರೂ, ಮತ್ತೊಮ್ಮೆ ಬಂದಾಗ ಖಂಡಿತ ಕಲಿಯುತ್ತೇನೆ. ಜತೆಗೆ ಕನ್ನಡವನ್ನೂ ಸ್ಪಷ್ಟವಾಗಿ ಮಾತನಾಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿತ್ತಾರೆ.
ಕುಂದಾಪುರ ಕನ್ನಡ ಕಲಿತ ಥೆರಸಾ ಈಗ ಅಪ್ಪಟ ಕನ್ನಡತಿ ಆಗಿಬಿಟ್ಟಿದ್ದಾಳೆ. ಅದರಲ್ಲೂ ಈಕೆಯ ದನಿಯಲ್ಲಿ ಕುಂದಾಪುರ ಕನ್ನಡವನ್ನ ಕೇಳಿಸಿಕೊಂಡರೇ ಖಂಡಿತ ವಾಹ್ ಅಂತಾ ಹೇಳ್ತೀರಾ. ಒಟ್ನಲ್ಲಿ, ಇಲ್ಲಿನ ಸಂಸ್ಕೃತಿಗೆ ಮಾರು ಹೋಗಿ ಇಲ್ಲಿಯವಳೇ ಆಗಿಬಿಟ್ಟಿದ್ದಾಳೆ.